ಟವರ್ ವಿರುದ್ಧ ರೈತರ ಪ್ರತಿಭಟನೆ : ಬಂಟ್ವಾಳ ಕಸ್ಬ ಗ್ರಾಮದಲ್ಲಿ ರೈತರ ಸಭೆ ನಡೆಸದೆ ಕಾಮಗಾರಿ ಆರಂಭಿಸಿದ ಕಂಪನಿ

New Project (17)
Published on

ಬಂಟ್ವಾಳ: ನಾಲ್ಕುನೂರು ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂತ್ರಸ್ತ ರೈತರು ಕಾಮಗಾರಿ ವಿರುದ್ಧ ಪ್ರತಿಭಟಿಸಿದ ಘಟನೆ ಬಂಟ್ವಾಳ ಕಸ್ಬ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿ ಮಂಗಳವಾರ ನಡೆದಿದೆ. ಸ್ಥಳಕ್ಕೆ ಧಾವಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್ ರೈತರ ಮನವೊಲಿಸಿ ಕಾಮಗಾರಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರು. ದರ್ಬಳಿಕೆಯ ಖಾಸಗಿ ಜಮೀನಿನಲ್ಲಿ 400 ಕೆ.ವಿ. ವಿದ್ಯುತ್ ಪ್ರಸರಣ ತಂತಿಯನ್ನು ಅಳವಡಿಸಲು ಗುತ್ತಿಗೆ ಸಂಸ್ಥೆಯಾಗಿರುವ ಸ್ಟೆರ್‌ಲೈಟ್ ಪವರ್ ಕಂಪನಿ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಮೂಲಕ ಮರ ಉರುಳಿಸಿ ನೆಲ ಸಮತಟ್ಟು ಮಾಡುವ ಕೆಲಸ ಆರಂಭಿಸಿತ್ತು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ರೈತ ಸಂಘ 400 ಕೆ.ವಿ. ಸಂತ್ರಸ್ತ ರೈತರ ಹೋರಾಟ ಸಮಿತಿ ಪ್ರಮುಖರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂಪನಿ, ಸಂತ್ರಸ್ತ ರೈತರ ಸಭೆ ನಡೆಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳೀಯ ಜನರಿಗೆ ಯಾವುದೇ ಮಾಹಿತಿ ನೀಡದೆ, ಅರಣ್ಯ ಇಲಾಖೆಯಿಂದ ಮರ ಕಡಿಯಲು ಅನುಮತಿ ಪಡೆಯದೆ ಭೂಮಿ ಅಗೆಯುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಮುಖರಾದ ಬೆನೆಡಿಕ್ಟ್ ಕಾರ್ಲೋ, ಅರುಣ್ ಡಿಸೋಜಾ, ಅಲೆಕ್ಸ್ ಸಿಕ್ವೇರಾ, ಸಂತೋಷ್ ಪಿಂಟೊ, ರಾಮಪ್ಪ ನಾಯ್ಕ, ಜನಾರ್ದನ, ಕೃಷ್ಣ ನಾಯ್ಕ, ವಿಲಿಯಂ ಪಿಂಟೋ, ರೋಷನ್ ಡಿಸೋಜಾ ಸಾಥ್ ನೀಡಿದರು. ಎಸಿ ಭೇಟಿ: ಬಂಟ್ವಾಳ ನಗರ ಠಾಣೆ ಎಸೈ ರಾಮಕೃಷ್ಣ, ಸಿಬ್ಬಂದಿ ಸ್ಥಳಕ್ಕೆ ತೆರಳಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಬಳಿಕ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್, ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ. ಸ್ಥಳಕ್ಕೆ ಆಗಮಿಸಿ ರೈತರನ್ನು ವಿನಂತಿಸಿದರೂ ಸಭೆ ನಡೆಸದೆ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದರು. ಅಂತಿಮವಾಗಿ ಸಹಾಯುಕ ಆಯುಕ್ತ ಹರ್ಷವರ್ಧನ್ ಸ್ಥಳಕ್ಕೆ ಆಗಮಿಸಿ, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅನುಷ್ಠಾನಗೊಳಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಈಗಾಗಲೇ ತುಂಬಾ ತಡವಾಗಿದ್ದು, ಕೇರಳ ಭಾಗದಲ್ಲಿ ಭಾಗಶಃ ಕೆಲಸ ಪೂರ್ಣಗೊಂಡಿದೆ. ಬಂಟ್ವಾಳ ತಾಲೂಕಿನಲ್ಲಿ 93 ಕಡೆಗಳಲ್ಲಿ ಟವರ್ ನಿರ್ಮಾಣ ಕೆಲಸ ಆಗಬೇಕಾಗಿದ್ದು, ಅಗ್ರಿಮೆಂಟ್ ಇರುವ ಜಾಗದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ನಿಮ್ಮ ಆಕ್ಷೇಪಗಳಿದ್ದಲ್ಲಿ ನ್ಯಾಯಾಲಯದಲ್ಲಿ ಕಾನೂನಿನ ಮೂಲಕ ಹೋರಾಟ ಮಾಡುವಂತೆ ತಿಳಿಸಿ ಕೆಲಸ ಆರಂಭಿಸಲು ಸೂಚಿಸಿದರು. ಇದೇ ವೇಳೆ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆ ಪರಿವೀಕ್ಷಣೆಗಾಗಿ ದೆಹಲಿಯಿಂದ ಬಂದಿರುವ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತು. ಕಂದಾಯ ನಿರೀಕ್ಷಕ ಜನಾರ್ದನ, ವಿ.ಎ.ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಕರ್ಪೆ, ಅರಳ, ಪಂಜಿಕಲ್ಲು, ಬಿ.ಕಸ್ಬದ ರೈತರ ಸಭೆ ಕರೆಯಬೇಕೆಂದು ಹೇಳಿದರೂ ಸಭೆ ಕರೆದಿಲ್ಲ. ನಮ್ಮ ಹಿರಿಯರಿಂದ ಬಂದ ಕೃಷಿ ಭೂಮಿಯನ್ನು ಉಳಿಸುವ ಜವಬ್ದಾರಿ ನಮ್ಮ ಮೇಲಿದೆ. ಯಾವ ಕಾರಣಕ್ಕೂ ವಿದ್ಯುತ್ ಲೈನ್ ಈ ಭಾಗದಲ್ಲಿ ಹಾದು ಹೋಗಲು ಬಿಡುವುದಿಲ್ಲ. ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ರೈತ ಸಂಘದ ಜಿಲ್ಲಾಧ್ಯಕ್ಷ

ಕರ್ಪೆ, ಅರಳ, ಪಂಜಿಕಲ್ಲು, ಬಿ.ಕಸ್ಬ ಗ್ರಾಮದಲ್ಲಿ 400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಹಾದು ಹೋಗದಂತೆ ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರ ಸಭೆ ಕರೆದು ನಮಗೆ ಸರಿಯಾದ ಮಾಹಿತಿ ಕೊಡಲಿ ಎನ್ನುವುದು ನಮ್ಮ ಬೇಡಿಕೆ. ಅಧಿಕಾರಿಗಳ ಬಳಿ ಹೋದಾಗ ಸಭೆ ಕರೆಯುವುದಾಗಿ ಹೇಳುತ್ತಾರೆ. ಇಲ್ಲಿ ಕಂಪನಿ ಸಿಬ್ಬಂದಿ ಯಾವುದೇ ಮಾಹಿತಿ ನೀಡದೆ ಕೆಲಸ ಮಾಡುತ್ತಾರೆ. ನಮ್ಮ ಜಮೀನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಬೆನಡಿಕ್ಟ್ ಕಾರ್ಲೋ, ಸಂತ್ರಸ್ತ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net