

ಮಂಗಳೂರು: ಸಾಹಿತ್ಯ ಸಮಾಜಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು, ವಿಭಿನ್ನವಾಗಿ ಯೋಚನೆ ಮಾಡುವಂತೆ ಮಾಡಬಲ್ಲುದು. ನಮ್ಮ ಮಣ್ಣಿನ ಸಾಹಿತ್ಯ, ಸಂಸ್ಕೃತಿ, ಉದಾತ್ತತೆಯನ್ನು ಯುವಜನರಿಗೆ ತಲುಪಿಸುವ ಉದ್ದೇಶವನ್ನು ಜ.11 ಮತ್ತು 12 ರಂದು ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್ ಹೊಂದಿದೆ ಎಂದು ಭಾರತ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಕುಲಕರ್ಣಿ ಹೇಳಿದರು.
ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ, ಭಾರತ್ ಫೌಂಡೇಶನ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ ನಡೆದ ಅಂತರ್ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಲಿಟ್ ಫೆಸ್ಟ್ ಭಾರತೀಯ ಸಾಹಿತ್ಯ, ಸಂಸ್ಕೃತಿಯನ್ನು ತೆರೆದಿಡುವ ವೇದಿಕೆ. ಇದು ದೇಶ-ವಿಧೇಶಗಳ ಸಂಪನ್ಮೂಲ ವ್ಯಕ್ತಿಗಳನ್ನು ಕೇಳುವ, ಅವರೊಂದಿಗೆ ಮುಖಾಮುಖಿ ಸಂವಾದ ನಡೆಸುವ ವೇದಿಕೆ ಎಂದರು.
ವಿದ್ವಾನ್ ಡಾ.ರಾಘವೇಂದ್ರ ರಾವ್ ‘ಯುವಜನರಲ್ಲಿ ಸಾಹಿತ್ಯದ ಒಲವು’ ಕುರಿತು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ವಿ.ಬಿ. ಕುಳಮರ್ವ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಂತರ್ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದ, ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.
ಲತೇಶ್ ಕಾಂತ ಕಾರ್ಯಕ್ರಮ ನಿರೂಪಿಸಿ, ಕಾಜಲ್ ವಂದಿಸಿದರು. ಪುತ್ತೂರಿನ ವಿದುಷಿ ಅನಸೂಯ ಪಾಠಕ್ ಮತ್ತವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.