

ನಂಜನಗೂಡು: ಕಾಡುಗಳಲ್ಲಿ ದನ ಕರುಗಳನ್ನು ಮೇಯಿಸಲು ನಿರ್ಬಂಧ ವಿಧಿಸಿರುವುದಾಗಿ ಹೇಳಿಕೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ರೈತ ಮುಖಂಡ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಸಚಿವರಿಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿನ ಗ್ರಾಮಗಳ ರೈತರು ಅರಣ್ಯದೊಳಗೆ ಯಾವುದೇ ಕಾರಣಕ್ಕೂ ದನ ಕರುಗಳು, ಮೇಕೆಗಳನ್ನು ಬಿಡಬಾರದೆಂದು ಹೇಳಿಕೆ ನೀಡಿದ್ದಾರೆ. ಕಾಡಂಚಿನ ರೈತರು ತಮ್ಮ ಪಶುಗಳನ್ನು ಅರಣ್ಯದೊಳಗೆ ಬಿಟ್ಟರೆ ಸಾಂಕ್ರಾಮಿಕ ರೋಗಗಳು ಬರುತ್ತವೆ ಎಂಬ ಕಾರಣ ನೀಡಿದ್ದಾರೆ. ಹಾಗೆಯೆ ಮದ್ರಾಸ್ ಹೈಕೋರ್ಟ್ ಯಾವುದೇ ಕಾರಣಕ್ಕೂ ದನ, ಕುರಿ, ಮೇಕೆಗಳನ್ನು ಅರಣ್ಯಕ್ಕೆ ಪ್ರವೇಶ ನೀಡಬಾರದೆಂಬ ಆದೇಶ ನೀಡಿದೆ. ಆ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದ್ದಿದಾರೆ. ಅರಣ್ಯ ಮತ್ತು ನದಿ ಪ್ರದೇಶಗಳು ನಾಗರಿಕತೆಯ ಉಗಮಕ್ಕೆ ಕಾರಣವಾಗಿದೆ. ಮಾನವರು ಕಾಡಿನಿಂದ ಬಂದವರು. ಕಾಡಿನೊಳಗೆ ದನಕರುಗಳನ್ನು ಮೇಯಿಸುವುದರಿಂದ ಏನು ಸಮಸ್ಯೆಯಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಇಂತಹ ಹೇಳಿಕೆ ಅವೈಜ್ಞಾನಿಕವಾಗಿದೆ. ಕಾಡಂಚಿನ ಪ್ರದೇಶಗಳ ರೈತರ ಜಮೀನಿಗೆ ಆನೆಗಳು ನುಗ್ಗಿ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತವೆ. ರೈತರು ದನಕರುಗಳಿಂದ ಒಂದಷ್ಟು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಅರಣ್ಯ ಸಚಿವರು ಹೈನುಗಾರರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಅರಣ್ಯ ಸಚಿವರು ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು. ಅರಣ್ಯ ಮತ್ತು ರೈತರಿಗೆ ಅವಿನಾಭಾವ ಸಂಬಂಧವಿದೆ. ರೈತರು ತಮ್ಮ ಜಮೀನಿನ ಸುತ್ತಮುತ್ತ ಗಿಡ, ಮರಗಳನ್ನು ಬೆಳೆಸಿದ್ದಾರೆ. ಇವತ್ತು ದೇಶ ಉಳಿದಿದೆ ಎಂದರೆ ರೈತರಿಂದ ಮಾತ್ರ ಸಾಧ್ಯ. ರೈತರಿಂದ ಅರಣ್ಯ ಸಮೃದ್ಧಿಯಾಗಿ ಬೆಳೆಯುತ್ತದೆ. ಆದರಿಂದ ಅರಣ್ಯ ಸಚಿವರು ರೈತ ವಿರೋಧಿ ಹೇಳಿಕೆಯನ್ನು ಹಿಂಪಡೆಯಬೇಕೆಂದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್ ಮೂಲಕ ಅರಣ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಸತೀಶ್ ರಾವ್, ಮೋಹನ್ ರಾಯಣ್ಣ, ಚಿಕ್ಕಾಟಿ ಜಯಪ್ರಕಾಶ್, ಗುಂಡುಪೇಟೆ ತಾಲೂಕು ಅಧ್ಯಕ್ಷ ಪ್ರಭು, ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಮಹೇಶ್, ಶಿವಣ್ಣ, ಮಾರ್ಬಳ್ಳಿ ಸೋಮಣ್ಣ, ಶಾಂತಗೌಡ, ನಟರಾಜು ಭಾಗವಹಿಸಿದ್ದರು.