ಗೌರಿಬಿದನೂರು: ತಾಲೂಕಿನಲ್ಲಿ ಚಿರತೆ, ಕರಡಿ ಹಾವಳಿ ಹೆಚ್ಚಾಗಿದ್ದು, ದಾಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ತಾಲೂಕಿನಲ್ಲಿ ಚಿರತೆ, ಕರಡಿಗಳ ಹಾವಳಿಯಿಂದ ಸಾಕು ಪ್ರಾಣಿಗಳಾದ ಮೇಕೆ, ಕುರಿ, ಹಸು ಬಲಿಯಾಗುತ್ತಿವೆ. ಆರ್ಕುಂದ, ಅರಸಾಲ ಬಂಡೆಯ ಅರಣ್ಯ ಪ್ರದೇಶದ ಅಂಚಿನಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಅಲ್ಲಿ ಉಂಟಾಗುವ ಸ್ಫೋಟಕ ಶಬ್ದಕ್ಕೆ ಬೆದರಿ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ಬಂದು ಸಾಕು ಪ್ರಾಣಿಗಳ ಜೀವ ತೆಗೆಯುತ್ತಿವೆ. ಜನರು ಭಯದಿಂದ ಬದುಕುವ ಪರಿಸ್ಥಿತಿಯಾಗಿದೆ. ವನ್ಯ ಮೃಗಗಳ ಹಾವಳಿ ತಡೆಯಲು ಅಗತ್ಯ ಕ್ರಮ ಜರುಗಿಸಬೇಕು ಎಂದರು. ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ವಲಯ ಅರಣ್ಯಾಧಿಕಾರಿ ಕೃಷ್ಣೇಗೌಡಗೆ ಮನವಿ ಸಲ್ಲಿಸಲಾಯಿತು.