ಕಳಪೆ ಬೀಜ ಪೂರೈಕೆಗೆ ರೈತರು ಗರಂ

12SGN02
Published on

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

ಕಳಪೆ ಸೋಯಾಬೀನ್ ಬೀಜ ಬಿತ್ತನೆ ಮಾಡಿ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಜಿಪಂ ಮಾಜಿ ಸದಸ್ಯ ಶಶಿಧರ ಹೊಣ್ಣನ್ನವರ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದ ಕೃಷಿ ಇಲಾಖೆ ಕಟ್ಟಡಕ್ಕೆ ಬೀಗ ಜಡಿದು ಏಳು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

ಈ ವರ್ಷ ಸಕಾಲಕ್ಕೆ ಮಳೆ ಸುರಿದರೂ ಸೋಯಾಬೀನ್ ಬೀಜ ಮೊಳಕೆಯೊಡೆದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗೈದಿದ್ದ ಎಕರೆವಾರು ವೆಚ್ಚ ಭರಿಸಬೇಕು. ಮರು ಬಿತ್ತನೆಗೆ ಬೀಜ, ಗೊಬ್ಬರ ಉಚಿತವಾಗಿ ಪೂರೈಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.

ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಳಪೆ ಬೀಜ ಪೂರೈಕೆಯಾಗಿದ್ದು, ಈ ಕುರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶಬಾಬುರಾವ್ ದೀಕ್ಷಿತ, ರೈತರನ್ನು ಸಮಾಧಾನ ಮಾಡಿ, ವಿಷಯವನ್ನು ಕೃಷಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಂಗಳೂರಿನಲ್ಲಿ ಕೃಷಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದೆ. ರೈತರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆಯಲಾಯಿತು.

ರೈತರಾದ ಬಸವರಾಜ ಕುರಗೋಡಿ, ನಾಗರಾಜ ಪಾಟೀಲ, ದ್ಯಾಮಣ್ಣ ಮಲ್ಲಾಡದ, ಡಿ.ವಿ. ರಾಯಣ್ಣವರ, ಶಂಕ್ರೆಪ್ಪ ಗುಳೇದಕೇರಿ, ಫಕೀರಪ್ಪ ಗಾಜಿಪುರ, ರಮೇಶ ಫಿರೋಜಿ, ರಾಯಪ್ಪ ಹೊಂಬಳ, ಶಂಕ್ರೆಪ್ಪ ಹೊಣ್ಣಣ್ಣವರ, ಶಿವಾನಂದ ಕ್ಷೌರದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net