

ನ್ಯಾಮತಿ: ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಅಲಸಂದಿ ಸೇರಿ ವಿವಿಧ ತರಕಾರಿ ಬೆಳೆಗಳ ಇಳುವರಿ ಕುಂಠಿತಗೊಂಡಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಸಂಬಂಧಿತ ಇಲಾಖೆ ಅಧಿಕಾರಿ ಮತ್ತು ಅಂಗಡಿಯವರನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೊಡ್ಡೆತ್ತಿನಹಳ್ಳಿ ಗ್ರಾಮದ ಕೆ.ಎಸ್. ಕರಿಬಸಪ್ಪ ದೂರಿದ್ದಾರೆ.
ತಾಲೂಕಿನ ಸುರಹೊನ್ನೆ ಗ್ರಾಮದ ಬೀಜ, ಗೊಬ್ಬರ ಮಾರಾಟ ಅಂಗಡಿಯೊಂದರಲ್ಲಿ ಜೂನ್ ತಿಂಗಳಿನಲ್ಲಿ ಖರೀದಿಸಿದ್ದ ನಾಮಧಾರಿ ಕಂಪನಿಯ ಮೆಕ್ಕೆಜೋಳ, ಬಳ್ಳಿ ಅಲಸಂದಿ ಸೇರಿ ವಿವಿಧ ತರಕಾರಿ ಬೀಜಗಳನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಮೆಕ್ಕ್ಕೆಜೋಳ ಬಿತ್ತನೆ ಬೀಜವು ಸರಿಯಾಗಿ ಮೊಳೆತಿಲ್ಲ.
ಜಮೀನು ಹಸನು ಬಿತ್ತನೆ ಮಾಡಲು, ಉತ್ತಮವಾಗಿ ಬೆಳೆಯಲು ಔಷಧ, ಗೊಬ್ಬರ ಸೇರಿ ಕೃಷಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದು ಪ್ರತಿ ಎಕರೆಗೆ ನಿರೀಕ್ಷಿತ ಇಳುವರಿ ಬಾರದೆ ಅಪಾರ ನಷ್ಟವಾಗಿದೆ.
ಖರೀದಿಸಿದ ಅಂಗಡಿಯವರಿಗೆ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೃಷಿ ಇಲಾಖೆಯವರು ಸಂಬಂಧಿತ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಆಗಿರುವ ನಷ್ಟ ಭರಿಸಿಕೊಡುವಂತೆ ಒತ್ತಾಯಿಸಿದರು.