ರೈತರ ಜಮೀನು ಲಪಟಾಯಿಸಲು ಬಿಡಲ್ಲ

HDK Live
Published on

* ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗುಡುಗು

*ಕೃಷಿ ಭೂಮಿ ಉಳಿವಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭರವಸೆ

ಬಿಡದಿ

ರೈತರ ಭೂಮಿ ಉಳಿವಿಗಾಗಿ ಪಾದಯಾತ್ರೆ ಅನಿವಾರ್ಯ. ಸಾಧ್ಯವಾದರೆ ನಾನೂ ಬರುವೆ. ಅಭಿವೃದ್ಧಿ ನೆಪದಲ್ಲಿ ರೈತರ ಜಮೀನು ಲಪಟಾಯಿಸಲು ಎಂದಿಗೂ ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದಿಲ್ಲಿಯಿಂದಲೇ ಗುಡುಗಿದರು.

ಬಿಡದಿ ಉಪನಗರ ಭೂಸ್ವಾಧಿನ ವಿರೋಧಿಸಿ ಬೈರಮಂಗಲ ಗ್ರಾಮದಲ್ಲಿನ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ದೆಹಲಿಯಿಂದಲೇ ವರ್ಚುವಲ್ ಮೂಲಕ ಮಾತನಾಡಿದ ಎಚ್‌ಡಿಕೆ, ನಾನು ಮುಖ್ಯಮಂತ್ರಿಯಾಗಿದ್ದಾಗ ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿದ್ದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತು ಸತ್ಯಕ್ಕೆ ದೂರ. ಯಾವುದೇ ಭೂಸ್ವಾಧೀನ ಮಾಡಿರಲಿಲ್ಲ, ಮಾಡಬೇಕೆಂದು ಹೊರಟಾಗ ಈ ಭಾಗದ ರೈತರು ಬೇಡ ಎಂದರು. ಆಗ ಭೂಸ್ವಾಧೀನ ಕೈಬಿಡಲಾಗಿದೆ. ನಾನು ಯಾವ ರೈತರಿಗೂ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಮ್ಮ ಕುಟುಂಬದ ಮೇಲೆ ಆಪಾದನೆ ಸಲ್ಲ

ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ಕುಟುಂಬದ ಮೇಲೆ ಪದೇಪದೆ ಆಪಾದನೆ ಮಾಡುತ್ತಿದೆ. ದೇವೇಗೌಡರು ಸಿಎಂ ಆಗಿದ್ದಾಗ ಬೆಂಗಳೂರು-ಮೈಸೂರು ರಸ್ತೆ ವಿಸ್ತರಣೆಗೆ ನಿರ್ಧರಿಸಿದ್ದರು. ನೈಸ್ ರಸ್ತೆ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದರು. ಕಾರಣಾಂತರಗಳಿಂದ ದೇವೇಗೌಡರು ದೆಹಲಿಗೆ ಹೋಗಬೇಕಾಯಿತು. ಬಿಡದಿ ಉಪನಗರ ಯೋಜನೆಯೂ ಹಾಗೆ ಇತ್ತು. ತದನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಂದೂ ಸಚಿವರಾಗಿದ್ದ ಇದೇ ಡಿ.ಕೆ.ಶಿವಕುಮಾರ್ ಒಂದು ಪ್ರಾಧಿಕಾರ ಮಾಡಿ ಅಧ್ಯಕ್ಷರಾಗಿದ್ದರು. ಆದರೆ, ಇಲ್ಲಿಯವರೆಗೂ ಆ ರೈತರಿಗೆ ಪರಿಹಾರ ಕೊಡಿಸಿಲ್ಲ. ಇಂತಹವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಕುಟುಕಿದರು.

ಸರ್ಕಾರಿ ಭೂಮಿ ಕಬಳಿಸುವ ಹುನ್ನಾರ

ಜಿಬಿಡಿಎ ಹೆಸರಲ್ಲಿ 9 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದರಲ್ಲಿರುವ ಸರ್ಕಾರಿ ಭೂಮಿಯನ್ನು ಲೂಟಿ ಮಾಡಲು ಹುನ್ನಾರ ನಡೆಸಿ, ಸ್ಮಾರ್ಟ್ ಸಿಟಿ ಹೆಸರು ಹೇಳುತ್ತಿದ್ದಾರೆ. ನಾನು ಹಾಸನದಲ್ಲಿ ಹುಟ್ಟಿದ್ದರೂ ಋಣಾನುಬಂಧದಿಂದ ರಾಮನಗರ ಜಿಲ್ಲೆಯಲ್ಲಿ ಸಂಬಂಧ ಬೆಳೆದಿದೆ. ಇಲ್ಲಿ ಜಮೀನು ಖರೀದಿಸಿ ಇಲ್ಲೇ ಉಳಿದುಕೊಂಡಿದ್ದೇನೆ. ಬಡವರ, ಸರ್ಕಾರಿ ಭೂಮಿ ಕಬಳಿಸಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್‌ಡಿಕೆ ಅಭಯ ನೀಡಿದರು.

ಡಿಕೆಶಿಗೆ ನೈತಿಕತೆ ಇದೆಯೇ?

ಡಿಸಿಎಂ ಡಿ.ಕೆ.ಶಿವಕುಮಾರ್ ಬಿಡದಿಯ ಬಿಲ್ಲ ಕೆಂಪನಹಳ್ಳಿಯಲ್ಲಿ ಒಬ್ಬ ವ್ಯಕ್ತಿಯನ್ನು ಹೆದರಿಸಿ, ಕಿಡ್ನಾಪ್ ಮಾಡಿ ಭೂಮಿ ಲಪಟಾಯಿಸಿ, ಇಂದು ಬಿಲ್ಡಿಂಗ್ ಕಟ್ಟಿಕೊಂಡಿದ್ದಾರೆ. ಇದಲ್ಲದೆ ಒಬ್ಬ ನಿವೃತ್ತ ಯೋಧನ ಜಮೀನನ್ನೂ ಡಿಕೆಶಿ ಕಬಳಿಸಿದ್ದಾರೆ. ಇಂತವರು ದೇವೇಗೌಡರು ಹಾಗೂ ನಮ್ಮ ಬಗ್ಗೆ ಮಾತಾಡುತ್ತಾರೆ, ಅವರಿಗೆ ಯಾವ ನೈತಿಕತೆ ಇದೆ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಅಧಿಕಾರಿಗಳ ದುಂಡಾವರ್ತನೆ ಸಹಿಸಲ್ಲ

ರೈತರ ಪರವಾಗಿ ಧ್ವನಿ ಎತ್ತಲು ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿ ಸ್ವಾಧೀನ ಮಾಡಲು ಬಿಡಲ್ಲ. ಸರ್ಕಾರ ಇದೆ ಎಂದು ಅಧಿಕಾರಿಗಳು, ಪೊಲೀಸರ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸಿ ಸರ್ವೇ ಮಾಡಿದರೆ ಮುಂದೆ ಪ್ರಾಯಶ್ಚಿತ ಪಡಬೇಕಾಗುತ್ತದೆ. ನಾನು ನೋಡದೇ ಇರೋ ಅಧಿಕಾರಿಗಳಿಲ್ಲ, ರೈತರಿಗೆ ಏನಾದರು ತೊಂದರೆ ಕೊಟ್ಟರೆ ನಾನು ಬರಬೇಕಾಗುತ್ತೆ ಹುಷಾರ್! ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದರು.

ರೈತಪರ ಸರ್ಕಾರವೂ ಬರುತ್ತೆ, ಡಿಕೆಶಿ ಜೈಲಿಗೂ ಹೋಗ್ತಾರೆ!!!

ಜೆಡಿಎಸ್ ಕಥೆ ಮುಗಿದು ಹೋಗುತ್ತದೆಂದು ಕೆಲವರು ಅಂದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರೈತಪರ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಇದರ ಜತೆಗೆ ಡಿ.ಕೆ.ಶಿವಕುಮಾರ್ ಮುಂದೆ ಜೈಲಿಗೆ ಹೋಗುವ ದಿನವೂ ಬರುತ್ತದೆ. ನೀವು ಯಾವ ರೀತಿ ಆಟ ಆಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ಎಲ್ಲದಕ್ಕೂ ದೇವರು ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ ಎಂದು ಎಚ್‌ಡಿಕೆ ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net