ತೋಟ ಒಣಗಿದರೂ ಕುಡಿಯಲು ನೀರು ಕೊಟ್ಟ ಪಾವೂರು ರೈತರು

ullal pavoor story
ಸ್ವಂತ ಕೊಳವೆ ಬಾವಿಯಿಂದ ಪಂಚಾಯಿತಿ ಪೈಪ್‌ಗೆ ಸಂಪರ್ಕ ಕಲ್ಪಿಸಿರುವುದು
Published on

ಅನ್ಸಾರ್ ಇನೋಳಿ ಉಳ್ಳಾಲ

ಈ ಬಾರಿ ಮಳೆ ವಿಳಂಬವಾಗಿ ಗ್ರಾಮೀಣ ಭಾಗದಲ್ಲೂ ತೆರೆದ ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಸ್ಥಳೀಯಾಡಳಿತ ಪ್ರತಿವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ನೀರಿಗೆ ಮೊರೆ ಹೋಗುವುದು ಸಾಮಾನ್ಯ. ಈ ಬಾರಿ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರೇ ಗತಿ ಎನಿಸಿತ್ತು. ಇಂತಹ ಕಾಲದಲ್ಲಿ ಗ್ರಾಮಸ್ಥರಿಗೆ ನಿಸ್ವಾರ್ಥವಾಗಿ ಜಲದಾನ ಮಾಡಿ ದಾಹ ನೀಗಿಸಿದ ಜಲದಾನಿಗಳ ಸೇವೆಗೆ ಪಾವೂರು ಗ್ರಾಮಸ್ಥರು ಋಣಿಯಾಗಿದ್ದಾರೆ.

ನದಿ ತಟದಲ್ಲೇ ಸಮಸ್ಯೆ

ಪಾವೂರು ಗ್ರಾಮದ ಆರು ವಾರ್ಡುಗಳ ಪೈಕಿ ನಾಲ್ಕು ವಾರ್ಡುಗಳು ನದಿ ತಟದಲ್ಲೇ ಇವೆ. ಆದರೂ ಮೂರು ವಾರ್ಡುಗಳಿಗೆ ನದಿಯ ಸಂಪರ್ಕವೇ ಇಲ್ಲದ, ಗುಡ್ಡ ಪ್ರದೇಶ ಎನಿಸಿರುವ ಐದನೇ ವಾರ್ಡ್‌ನಲ್ಲಿರುವ ಕೊಳವೆ ಬಾವಿ ನೀರೇ ಆಶ್ರಯವಾಗಿತ್ತು. ಬೇಸಿಗೆಯಲ್ಲಿ ಇಲ್ಲಿನ ಪಂಪ್ ದಿನವಿಡೀ ಚಾಲನೆಯಲ್ಲಿ ಇರುತ್ತದೆ. ವಿದ್ಯುತ್ ಕೈಕೊಟ್ಟರೆ ಮಾತ್ರ ಪಂಪ್‌ಗೆ ವಿಶ್ರಾಂತಿ. ಆದರೆ ಈ ಬಾರಿ ಬಿಸಿಲ ಝಳಕ್ಕೆ ಇಲ್ಲಿನ ಕೊಳವೆ ಬಾವಿಯಲ್ಲಿ ನೀರು ಕ್ಷೀಣಿಸಿತು. ಪರಿಣಾಮ ನೀರಿನ ಮೂಲವಾಗಿದ್ದ ಐದನೇ ವಾರ್ಡಿನಲ್ಲೇ ಸಮಸ್ಯೆ ಎದುರಾಯಿತು.

ಪಂಚಾಯಿತಿ ಪ್ರಯತ್ನ, ಕೈಬಿಡದ ಕೃಷಿಕರು!

ನೀರಿನ ಬರ ತಲೆದೋರಿದಾಗ ಪಂಚಾಯಿತಿ ಆಡಳಿತ ಕೃಷಿಕರ ಮೊರೆ ಹೋಯಿತು. ರಂಜಾನ್ ತಿಂಗಳಲ್ಲಿ ಮಸೀದಿ ಮತ್ತು ಆಸುಪಾಸಿನ ಮನೆಗಳಿಗೆ ಲೀಲಾಧರ ಪೂಜಾರಿ ಮಜಿಕಟ್ಟ ಮತ್ತು ವಿಲಿಯಂ ಡಿಸೋಜ ಹಳೆಕೋಟೆ ತಮ್ಮ ಕೊಳವೆ ಬಾವಿ ಸಂಪರ್ಕವನ್ನು ಪಂಚಾಯಿತಿ ಪೈಪ್‌ಲೈನ್‌ಗೆ ನೀಡಿ ಸಹಕರಿಸಿದರು.

ಇತರ ಭಾಗದಲ್ಲೂ ನೀರಿನ ಸಮಸ್ಯೆ ಎದುರಾದಾಗ ಪಂಚಾಯಿತಿ ಸದಸ್ಯ ವಲೇರಿಯನ್ ಡಿಸೋಜ ತೋಟಕ್ಕೆ ಕೊಳವೆ ಬಾವಿ ನೀರು ಕಡಿತಗೊಳಿಸಿ ಪಂಚಾಯಿತಿ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿದರು. ಆದರೂ ಎಲ್ಲ ಕಡೆ ನೀರು ಸರಬರಾಜು ಅಸಾಧ್ಯವೆನಿಸಿತು.
ಈ ಸಂದರ್ಭ ವಲೇರಿಯನ್ ಅವರೊಂದಿಗೆ ಇನ್ನೋರ್ವ ಸದಸ್ಯೆ ಚಂದ್ರಾವತಿ, ಪಂಚಾಯಿತಿ ಅಧ್ಯಕ್ಷೆ ಖಮರುನ್ನಿಸಾ, ಉಪಾಧ್ಯಕ್ಷ ಮಹಮ್ಮದ್ ಅನ್ಸಾರ್ ನೀರಿಗಾಗಿ ಪ್ರಯತ್ನಪಟ್ಟರು. ಅವರ ಮನವಿ ಮೇರೆಗೆ ವಿಲ್ಸನ್ ಲೋಬೊ ಕಂಬಳಪದವು, ಕಿರಣ್ ಶೆಟ್ಟಿ ಕಿಲ್ಲೂರು ತಮ್ಮ ಮನೆ ಮತ್ತು ಕೃಷಿಗೆ ಬಳಸುವ ಕೊಳವೆ ಬಾವಿಗಳಿಂದ ಅಗತ್ಯಕ್ಕಿಂತಲೂ ಹೆಚ್ಚು ನೀರು ಒದಗಿಸಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿದರು. ಸರಿಯಾಗಿ ಮಳೆಯಾಗದಿರುವುದರಿಂದ ಈ ಸಂಪರ್ಕ ಇನ್ನೂ ಕೆಲಕಾಲ ಮುಂದುವರಿಯುವ ಸಾಧ್ಯತೆ ಇದೆ. ಈ ಕೃಷಿಕರ ಸಕಾಲ ಸ್ಪಂದನೆಯನ್ನು ಜನರು ಶ್ಲಾಘಿಸುತ್ತಿದ್ದಾರೆ.

ಈ ಬಾರಿ ವಾರ್ಡಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನೀರಿನ ಸಮಸ್ಯೆ ಕಾಡಿದೆ. ಸ್ಥಳೀಯ ಕೃಷಿಕರು ಕೃಷಿಗೆ ನೀರು ಬಿಡದೆ ಜನರ ಹಿತದೃಷ್ಟಿಯಿಂದ ನೀರು ನೀಡುತ್ತಿದ್ದಾರೆ. ಜಲದಾನಿಗಳನ್ನು ಪಂಚಾಯಿತಿ ಗುರುತಿಸಲಿದ್ದು ಈ ಬಗ್ಗೆ ಚರ್ಚಿಸಲಾಗುವುದು.-ವಲೇರಿಯನ್ ಡಿಸೋಜ, ಐದನೇ ವಾರ್ಡ್ ಗ್ರಾಪಂ ಸದಸ್ಯ

ರಂಜಾನ್ ತಿಂಗಳಲ್ಲೂ ನೀರಿನ ಸಮಸ್ಯೆಯಿಂದ ಮಸೀದಿಯಲ್ಲಿ ನಮಾಜ್ ಕಷ್ಟ್ಟವಾಗಿತ್ತು, ಆ ಸಂದರ್ಭ ಸ್ಥಳೀಯರಾದ ಲೀಲಾಧರ ತಮ್ಮ ಮನೆ ಕೊಳವೆ ಬಾವಿಯಿಂದ ಮಸೀದಿ ಮತ್ತು ಸ್ಥಳೀಯ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಇತರ ಭಾಗಗಳಿಗೆ ಕೃಷಿಕರು ನೀರು ನೀಡುತ್ತಿರುವುದನ್ನು ಮರೆಯಲಾಗದು.-ಟಿ.ಎಚ್.ನಝೀರ್ , ಮಸ್ಜಿದುಲ್ ರಹ್ಮಾನ್ ಮತ್ತು ಹುದಾಯತುಲ್ ಇಸ್ಲಾಂ ಮದ್ರಸಾ ಅಧ್ಯಕ್ಷ

ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದರಿಂದ ತೀವ್ರ ಸಮಸ್ಯೆ ಆಗಿತ್ತು. ಆದರೆ ಗ್ರಾಪಂ ಕೃಷಿಕರನ್ನು ಸಂಪರ್ಕಿಸಿ ಸಮಸ್ಯೆ ನೀಗಿಸಿದೆ. ನೀರು ನೀಡಿ ಉದಾರತೆ ತೋರಿದ ಜಲದಾನಿಗಳಿಗೆ ವಂದನೆ.-ದೇವಿಪ್ರಸಾದ್ ಕಂಬಳಪದವು, ನೀರು ಪಡೆದವರು https://www.vijayavani.net/7-benefits-of-drinking-copper-pot-water

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net