ರೈತರ ಕೈಸೇರದ ಸಾಗುವಳಿ ಚೀಟಿ

WEB1
Published on

ದಶಕಗಳಾದರೂ ಖಾತೆಯೂ ಇಲ್ಲ, ಕಚೇರಿಗೆ ಅಲೆಯುವುದೂ ತಪ್ಪಿಲ್ಲ ಸರ್ಕಾರದ ವಿರುದ್ಧ ರೈತ ಸಂಘ ಆಕ್ರೋಶ

ಬಾಗೇಪಲ್ಲಿ: ನಾಲ್ಕೈದು ಶಾಸಕರು ಬದಲಾದರೂ ಬಾಗೇಪಲ್ಲಿ ಕ್ಷೇತ್ರದ ಬಡ ರೈತರ ಸಮಸ್ಯೆಗಳಿಗೆ ಇನ್ನು ಪರಿಹಾರ ದೊರಕಿಲ್ಲ. ಎರಡು ದಶಗಳಿಂದ ಸಾಗುವಳಿ ಚೀಟಿಗಾಗಿ ರೈತರು ನಿತ್ಯ ತಹಸೀಲ್ದಾರ್ ಕಚೇರಿಗೆ ಅಲೆದಾಡುವುದು ಮಾತ್ರ ನಿಂತಿಲ್ಲ. ಇನ್ನಾದರೂ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ಒತ್ತಾಯಿಸಿದರು.

ವಿಧಾನಸಭಾ ಕ್ಷೇತ್ರದ ರೈತರ ವಿವಿಧ 31 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಕಚೇರಿ ಬಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದುಮನವಿ ಆಲಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಪಟ್ಟುಹಿಡಿದರು.

ಈ ವೇಳೆ ಮಾತನಾಡಿದ ಎಚ್.ಎನ್.ಗೋವಿಂದರೆಡ್ಡಿ, ಆಂಧ್ರದ ಗಡಿಗೆ ಬಂದಿರುವ ಕೃಷ್ಣಾ ನದಿ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಲು ಸಾಧ್ಯವಾಗದಿರುವ ಜನಪ್ರತಿನಿಧಿಗಳು ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿವಂಗತ ಶಾಸಕ ಸಿ.ವಿ.ವೆಂಕಟರಾಯಪ್ಪ ಕಾಲದಲ್ಲಿ ರೈತರಿಗೆ ವಿತರಿಸಿರುವ ಸಾಗುವಳಿ ಚೀಟಿಗಳಿಗೆ ಇಂದಿಗೂ ಖಾತೆ ಮಾಡುತ್ತಿಲ್ಲ. 3 ದಶಕಗಳಿಂದ 4-5 ಶಾಸಕರು ಬದಲಾದರೂ ರೈತರು ಕಚೇರಿ ಅಲೆಯುವುದು ತಪ್ಪಿಲ್ಲ. ಕೆಲವರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ವಿತರಿಸಿದ್ದು, ಖಾತೆ ಮಾಡಿಕೊಡುವಂತೆ ಕಂದಾಯ ಸಚಿವರೇ ಆದೇಶ ಮಾಡಿದ್ದರೂ ಇದುವರೆಗೂ ಒಂದು ಖಾತೆಯನ್ನೂ ಮಾಡಿಲ್ಲ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟಶಿವಾರೆಡ್ಡಿ, ಮುಖಂಡರಾದ ವೈ.ಆರ್. ನರಸಿಂಹಾರೆಡ್ಡಿ, ಲಕ್ಷ್ಮೀನರಸಪ್ಪ, ಚೌಡರೆಡ್ಡಿ, ಕೆ.ವಿ.ವೆಂಕಟೇಶ್, ಕೃಷ್ಣಾರೆಡ್ಡಿ, ಎಸ್.ವೈ.ವೆಂಕಟರಮಣಾರೆಡ್ಡಿ, ನಾರಾಯಣಸ್ವಾಮಿ, ಟಿ.ರವಿನಾಯಕ್. ನರಸಿಂಹಾರೆಡ್ಡಿ, ಆಧಿನಾರಾಯಣಪ್ಪ ಮತ್ತಿತರರು ಇದ್ದರು.

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ

ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಮಾತನಾಡಿ, 60-70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಜಮೀನುಗಳಿಗೆ ವಕ್ಫ್ ಬೋರ್ಡ್ ಹಾಕಿ ಸರ್ಕಾರದ ಜಮೀನು, ಕೆಐಎಡಿಬಿಗೆ ಸೇರಿದ್ದು ಎನ್ನುತ್ತೀರಾ? ಬಾಗೇಪಲ್ಲಿ ಕ್ಷೇತ್ರ ಗಡಿ ಭಾಗದಲ್ಲಿದೆ ಎಂದು ಈ ಭಾಗದ ರೈತರನ್ನು ಮೂಲೆ ಗುಂಪು ಮಾಡಲಾಗಿದೆ. ಬಿಟ್ಟಿ ಭಾಗ್ಯ ನೀಡುವ ಬದಲು ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ ನೀಡಿ, ಕಚೇರಿಗಳಿಗೆ ಬರುವ ರೈತರಿಗೆ ಗೌರವ ಕೊಡುವುದನ್ನು ಅಧಿಕಾರಿಗಳಿಗೆ ಕಲಿಸಿಕೊಡಿ ಎಂದು ಗುಡುಗಿದರು.

ಭರವಸೆ ಈಡೇರಿಸದೆ ಅನ್ಯಾಯ

ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ, ಕೊಂಡರೆಡ್ಡಿಪಲ್ಲಿ ಗ್ರಾಮಗಳ ರೈತರ ಜಮೀನು ಸ್ವಾಧೀನಕ್ಕೆ ಒಪ್ಪಿಗೆಯೂ ಇಲ್ಲ, ಪರಿಹಾರವೂ ಇಲ್ಲ. ಆದರೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೆಸರಿಗೆ ಖಾತೆ ಬದಲಾಯಿಸಿ ವಂಚನೆ ಮಾಡಲಾಗಿದೆ. ಪಹಣಿಯಲ್ಲಿ ನಮೂದಾಗಿರುವ ಹೆಸರನ್ನು ವಾರದೊಳಗೆ ತಿದ್ದುಪಡಿ ಮಾಡಿ ರೈತರ ಹೆಸರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿ ಕೈತೊಳೆದುಕೊಂಡು ಅನ್ಯಾಯ ಮಾಡಲಾಗುತ್ತಿದೆ ಎಂದು ಗೋವಿಂದರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net