

ಗೌರಿಬಿದನೂರು: ತಾಲೂಕಿನ ದೊಡ್ಡಕುರುಗೋಡು ಗ್ರಾಮದಲ್ಲಿ ರೈತರು ಸಂಭ್ರಮದಿಂದ ಸುಗ್ಗಿ ಹಬ್ಬ ಆಚರಿಸಿದರು. ಮನೆಯ ಮುಂಭಾಗ ರಂಗೋಲಿ ಹಾಕಿ, ಕೊಳಗ, ಕಬ್ಬು, ನೇಗಿಲು ಇಟ್ಟು, ದನಕರುಗಳನ್ನು ಪೂಜಿಸಿದರು.
ಗ್ರಾಮದ ವಿವಿಧ ದೇವಾಲಯಗಳಿಗೆ ಪೂಜೆ ಸಲ್ಲಿಸಿ, ಅಲಂಕರಿಸಿದ್ದ ಎತ್ತಿನ ಗಾಡಿಗಳನ್ನು ಮೆರವಣಿಗೆ ಮಾಡಿದರು.
ರೈತ ಶ್ರೀರಾಮಪ್ಪ ಮಾತನಾಡಿ, ಸಂಕ್ರಾಂತಿ ಹಬ್ಬ ರೈತರ ಸಂಭ್ರಮಕ್ಕೆ ಸಾಕ್ಷಿ. ಇತ್ತೀಚೆಗೆ ದೇಸಿ ತಳಿ ಹಾಗೂ ಸಾವಯವ ಕೃಷಿಯನ್ನು ಬಿಟ್ಟಿದ್ದೇವೆ. ಇದು ಅನಾರೋಗ್ಯ ಉಂಟುಮಾಡುತ್ತಿದೆ. ದುಡಿಯುವ ರೈತ ಆರೋಗ್ಯವಂತನಾಗಿದ್ದರೆ ದೇಶವೇ ಆರೋಗ್ಯವಾಗಿದ್ದಂತೆ. ಪ್ರತಿ ರೈತರು ಸಾವಯವ ಕೃಷಿ ಪದ್ಧತಿಯತ್ತ ಒಲವು ತೋರಬೇಕು. ಹಿಂದಿನ ಸಂಪ್ರದಾಯ ಮರುಕಳಿಸುವಂತೆ ಸಂಕಲ್ಪ ಮಾಡಬೇಕು ಎಂದರು. ಗ್ರಾಮದ ರೈತ ಮುಖಂಡರಾದ ಅಶೋಕ್, ರಂಗನಾಥ್, ಅಶ್ವತ್ಥಪ್ಪ, ಕೊಂಡಪ್ಪ, ನಂಜುಂಡಪ್ಪ, ಗಂಗಾಧರ್ ಇತರರಿದ್ದರು.