

ಶಿರಸಿ: ರೈತರ ಸಾಲ ಮನ್ನಾ ಹಾಗೂ ಬರಗಾಲ ಪರಿಹಾರ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ರೈತ ಪರ ಸಂಘಟನೆಗಳ ಪ್ರಮುಖರು ಸೋಮವಾರ ತಾಲೂಕಿನ ದಾಸನಕೊಪ್ಪದಲ್ಲಿ ಶಿರಸಿ ಹಾವೇರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಸಿರು ಶಾಲು ಹೊದ್ದ ರೈತರು ಮೂರು ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಮೇಲೆ ಕುಳಿತು ಘೋಷಣೆ ಕೂಗಿದರು.
ಬರಗಾಲದಂಥ ಸಂದರ್ಭದಲ್ಲಿ ರೈತರು ಹೈರಾಣಾಗಿದ್ದಾರೆ. ಕೃಷಿ ಕಾರ್ಯ ಕೈಗೊಳ್ಳಲು ಸರಿಯಾದ ನೀರಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಮಾನವೀಯ ನೆಲೆಯಲ್ಲಿ ರೈತರಿಗೆ ಸಹಾಯ ಮಾಡಬೇಕು. ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು. ಬೆಳೆಸಾಲ ಮನ್ನಾ ಮಾಡಬೇಕು. ಹೊಸ ಸಾಲ ನೀಡುವಂತಾಗಬೇಕು. ಬರಗಾಲ ಪರಿಹಾರ ಹಣವನ್ನು ತಕ್ಷಣ ಜಮಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗೆ ಆಗ್ರಹಿಸಿದರು.
ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ಬರಗಾಲ ಸ್ಥಿತಿಯಿದ್ದರೂ ಉಸ್ತುವಾರಿ ಸಚಿವರು ಒಮ್ಮೆಯೂ ರೈತರ ಅಹವಾಲು ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಗಳು ಜನತಾ ದರ್ಶನದಲ್ಲಿ ರೈತರ ಮನವಿ ಸ್ವೀಕರಿಸಿದ್ದಾರೆ ವಿನಾ ಪರಿಹಾರ ಈವರೆಗೆ ನೀಡಿಲ್ಲ. ಯಾವ ಕಾರಣಕ್ಕೆ ರೈತರ ಸಮಸ್ಯೆ ಜೀವಂತ ಇಡಲಾಗುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳ ಮನಸ್ಸಲ್ಲಿ ರೈತರ ಬಗ್ಗೆ ನಿರಾಸಕ್ತಿ ಇದೆ. ಇದು ಖಂಡನೀಯ ಎಂದರು. ವಾರದೊಳಗೆ ಬೆಳೆ ವಿಮೆ ಜಮಾ ಮಾಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲವಾದರೆ ಇನ್ನಷ್ಟು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಅತಿಕ್ರಮಣದಾರರಿಗೆ ತೊಂದರೆ ಕೊಟ್ಟರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ-ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾನಿರತರು ಬಿಗಿಪಟ್ಟು ಹಿಡಿದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಸ್ಥಳಕ್ಕಾಗಮಿಸಿ ರೈತರ ಅಹವಾಲು ಕೇಳಿ, ಉಪವಿಭಾಗಾಧಿಕಾರಿ ಜತೆ ಮಾತುಕತೆಯಾಡಿ ವಾರದೊಳಗೆ ರೈತರ ಜತೆ ಸಭೆ ನಡೆಸಲು ಕೋರಲಾಗುವುದು ಎಂದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಪ್ರಮುಖರಾದ ಪ್ರಮೋದ ಜಕಲಣ್ಣನವರ್, ಜಾಕೀರ್ ಹುಸೇನ್, ನಾಗರಾಜ ಡಾಂಗೆ, ನವೀನ ಜಡೇದರ್, ಹಾಲಪ್ಪ ಜಕಲಣ್ಣನವರ, ಆನಂದ ಗೌಡ, ಪ್ರಶಾಂತ ಗೌಡ, ದ್ಯಾಮಣ್ಣ ದೊಡ್ಮನಿ, ರಾಜಶೇಖರ ಗೌಡ ಇತರರಿದ್ದರು.