

ಡಿ.ಪಿ.ಮಹೇಶ್ ಯಳಂದೂರು
ಹಲ್ಲು ಇದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ ಎಂಬ ಗಾದೆ ಮಾತಿನಂತೆ ತಾಲೂಕಿನ ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಇಲ್ಲಿನ ರೈತರಿಗೆ ಬಹುಮುಖ್ಯ ಬೇಡಿಕೆಯಾಗಿರುವ ಭತ್ತ ಕಟಾವು ಯಂತ್ರ ಸಿಗದಿರುವುದು ವಿಪರ್ಯಾಸವಾಗಿದೆ.
ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ರೈತರಿಗೆ ಉಪಯುಕ್ತವಾಗಿ ಬೇಕಾಗಿರುವ ಭತ್ತದ ಕಟಾವು ಯಂತ್ರವು ಇಲ್ಲದೆ ಪರದಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷೃತಾಳಿದ್ದಾರೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನ ಅಗರ, ಮಾಂಬಳ್ಳಿ, ಕಿನಕಹಳ್ಳಿ, ಕೆಸ್ತೂರು, ಗೌಡಹಳ್ಳಿ, ಮದ್ದೂರು, ಹೊನ್ನೂರು ಸೇರಿದಂತೆ ಒಟ್ಟು 3300 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಫಸಲು ಬೆಳೆಯಲಾಗಿದೆ. ಅಗರ ಗ್ರಾಮದಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ರೈತರಿಗೆ ಉಪಯುಕ್ತವಾಗುವ ಭತ್ತದ ಕಟಾವು ಯಂತ್ರವನ್ನು ತರಿಸಬೇಕೆಂದು ಹಲವು ತಿಂಗಳಿಂದ ಬೇಡಿಕೆ ಇದ್ದು, ಈ ಬಗ್ಗೆ ಸಂಬಂಧಪಟ್ಟ ಕೃಷಿ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ, ಇದ್ದರಿಂದ ಭತ್ತ ಕಟಾವಿಗೆ ಖಾಸಗಿ ವ್ಯಕ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿಗೆ ಕೂಲಿ ಕಾರ್ಮಿಕರು ದೊರಕದ ಪರಿಣಾಮ ಯಂತ್ರೋಪಕರಣಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ, ಸಣ್ಣ ಹಿಡುವಳಿದಾರರು ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಖರೀಸುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ ಯಂತ್ರೋಪಕರಣದ ಬಳಕೆ ಬಗ್ಗೆಯೂ ಅರಿವಿರುವುದಿಲ್ಲ. ಇದರಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕೃಷಿ ಯಂತ್ರಧಾರೆ ಯೋಜನೆಯನ್ನು ಹೋಬಳಿ ಮಟ್ಟದಲ್ಲಿ ಜಾರಿ ಮಾಡಿದೆ. ಈ ಮೂಲಕ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗನ್ನು ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ, ಈ ಯೋಜನೆ ಅಡಿಯಲ್ಲಿ ಭತ್ತ ಕಟಾವು ಯಂತ್ರ ರೈತರಿಗೆ ಲಭ್ಯವಾಗದಿರುವುದು ದುರಂತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಭತ್ತ ಕಟಾವು ಮಾಡುವ ಯಂತ್ರವನ್ನು ರೈತರಿಗೆ ಕಲ್ಪಿಸಿಕೊಡಬೇಕು ಎಂಬ ಬೇಡಿಕೆ ರೈತರದ್ದಾಗಿದೆ.