ಗೌಡಗೊಂಡನಹಳ್ಳಿಯಲ್ಲಿ ಅರಣ್ಯಭೂಮಿ ಒತ್ತುವರಿ ತೆರವು

jlr protest
Published on

ಜಗಳೂರು: ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ಸ.ನಂ. 50 ಮತ್ತು 51ರಲ್ಲಿ ಅರಣ್ಯಭೂಮಿ ಒತ್ತುವರಿ ತೆರವುಗೊಳಿಸಲು ಶುಕ್ರವಾರ ಅರಣ್ಯ ಇಲಾಖೆ ಮುಂದಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಅರಣ್ಯಾಧಿಕಾರಿಗಳು ಒತ್ತುವರಿ ಜಮೀನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಮಾಹಿತಿ ತಿಳಿದ ರೈತರು ಸಂಘಟನೆ ನೇತೃತ್ವದಲ್ಲಿ ಸ್ಥಳಕ್ಕೆ ದೌಡಾಯಿಸಿ ಅಡ್ಡಗಟ್ಟಿ ನಿಂತಾಗ ರೈತ ಮುಖಂಡರು ಹಾಗೂ ರೈತರನ್ನು ಪೊಲೀಸರು ಬಂಧಿಸಿ ಗಡಿಮಾಕುಂಟೆ ಠಾಣೆಗೆ ಕಳಿಸಿದರು.

20 ಕ್ಕೂ ಹೆಚ್ಚು ರೈತರು ಹಲವಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದಾರೆ. ಆದರೆ, ಅರಣ್ಯಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಅರಣ್ಯ ಇಲಾಖೆ ಕಳೆದೊಂದು ವರ್ಷದಿಂದ ನೋಟಿಸ್ ನೀಡಿ ತೆರವಿಗೆ ಸೂಚಿಸಿತ್ತು. ಎಸಿಎಫ್ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಅರಣ್ಯ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿ ಸಸಿ ನೆಟ್ಟರು.

80 ವರ್ಷಗಳಿಂದ ಈ ಭೂಮಿಯಲ್ಲಿ ಉಳುಮೆ ಮಾಡಿ ಜೀವನ ನಡೆಸುತ್ತಿದ್ದೇವೆ. ಇದೀಗ ಈ ಜಾಗ ಅರಣ್ಯಕ್ಕೆ ಸೇರಿದೆ ಎಂದು ತೆರವಿಗೆ ಬಂದಿದ್ದಾರೆ. ಪ್ರಾಣ ಬಿಟ್ಟೇವು, ಭೂಮಿ ಬಿಟ್ಟುಕೊಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು. ಇದು ನ್ಯಾಯಾಲಯದ ಆದೇಶ. ಅದನ್ನು ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಅರಣ್ಯ ಅಧಿಕಾರಿಗಳು ರೈತರ ಮನವಿಗೆ ಕಿವಿಗೊಡದೆ ತೆರವುಗೊಳಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2006-08 ಅರಣ್ಯ ಕಾಯ್ದೆಯ ಪ್ರಕಾರ ಅರ್ಜಿಗಳನ್ನು ತೆಗೆದುಕೊಂಡಿದ್ದು, ಪಟ್ಟ ಕೊಡದೇ ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ತಪ್ಪು ನಿರ್ಧಾರದಿಂದ ಗ್ರಾಮದ ಅನೇಕ ರೈತರು ವಿಷ ಕುಡಿಯುವ ಸ್ಥಿತಿಯಲ್ಲಿದ್ದಾರೆ. ತಕ್ಷಣವೇ ಸಿಎಂ ಸಿದ್ದರಾಮಯ್ಯ, ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಆದೇಶ ನೀಡಿ ತೆರವು ಕೆಲಸವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ರೈತರ ಸಾಗುವಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದಿಂದ ಸಸಿ ನೆಟ್ಟಿದ್ದಾರೆ. ರೈತರಿಗೆ ನ್ಯಾಯ ಸಿಗುವವರೆಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಠಾಣೆ ಆವರಣದಲ್ಲಿ ಪ್ರತಿಭಟನೆ: ಅರಣ್ಯ ಇಲಾಖೆಯ ಕಾರ್ಯವೈಖರಿ ವಿರೋಧಿಸಿ ಹಿರೇಮಲ್ಲನಹೊಳೆ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಕೂರಿಸಿದರು. ಈ ವೇಳೆ ಅರಣ್ಯಾಧಿಕಾರಿಗಳು, ಪೊಲೀಸರು, ಸಚಿವರು ಹಾಗೂ ಸರ್ಕಾರದ ವಿರುದ್ಧ ರೈತರು ಘೊಷಣೆ ಕೂಗಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಚಿರಂಜೀವಿ, ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಬಳ್ಳಾರಿ ಜಿಲ್ಲಾಧ್ಯಕ್ಷ ದೇವೇಂದ್ರ ಕಳಂಗೆರೆ, ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ್ ಬಾಣಕರ್, ಮಡ್ರಳ್ಳಿ ತಿಪ್ಪೇಸ್ವಾಮಿ, ಹಸಿರು ಸೇನೆ ತಾಲೂಕು ಅಧ್ಯಕ್ಷ ಕಸವನಹಳ್ಳಿ ನಾಗರಾಜ್, ರಂಗಪ್ಪ, ಶರಣಪ್ಪ, ಹೊನ್ನೂರ್ ಅಲಿ, ರಂಗಜ್ಜ ಹನುಮಂತಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net