ಕಾಡುಪ್ರಾಣಿಗಳ ಉಪಟಳಕ್ಕೆ ರೈತರು ತತ್ತರ

12-bidadi-3
Published on

ಚೇತನ್ ಚಕ್ಕೆರೆ ಬಿಡದಿ

ಕಾಡುಪ್ರಾಣಿಗಳ ಹಾವಳಿಯಿಂದ ಬಿಡದಿ ಭಾಗದ ರೈತರು ತತ್ತರಿಸಿದ್ದು, ರೈತರ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಕಾಡು ಹಂದಿಗಳ ಕಾಟ ಶುರುವಾಗಿದ್ದು, ಬರದಿಂದ ಕಂಗೆಟ್ಟ ರೈತರಿಗೆ ರಾತ್ರಿಪೂರ್ತಿ ಹಂದಿ ಕಾಯುವುದೇ ಕೆಲಸವಾಗಿದೆ.

ಹೌದು. ರೈತರು ಸಾಲಸೋಲ ಮಾಡಿ ಬೆಳೆ ಬೆಳೆಯುತ್ತಿದ್ದು, ಇದರ ನಡುವೆ ಬೆಳೆಗಳನ್ನು ರಕ್ಷಣೆ ಮಾಡಿ ಸಲನ್ನು ಮನೆಗೆ ತರುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಬಿಡದಿ ಹೋಬಳಿಯ ಬಾನಂದೂರು, ಕೆಂಪನಹಳ್ಳಿ, ಹೆಗ್ಗಡಗೆರೆ, ಗೋಪಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿರುವುದು ಕಾರಣ.

ರಾತ್ರಿ ವೇಳೆ ದಾಂಗುಡಿ

ರೈತರು ವಿದ್ಯುತ್ ಅಭಾವ, ಮಳೆ ಕೊರತೆಯ ನಡುವೆಯು ಮೆಕ್ಕೆಜೋಳ, ಬೇಬಿಕಾರ್ನ್, ಕಡಲೆಕಾಯಿ, ರಾಗಿ, ಭತ್ತ ಹೀಗೆ ಹಲವು ಬೆಳೆ ಬೆಳೆದಿದ್ದಾರೆ. ಇನ್ನೇನು ಫಸಲು ಕಟಾವಿಗೆ ಬಂತು ಎನ್ನುವಷ್ಟರಲ್ಲಿ ಕಾಡು ಹಂದಿಗಳು ದಾಂಗುಡಿ ಇಟ್ಟು ನಾಶ ಪಡಿಸುತ್ತಿವೆ. ರಾತ್ರಿ ವೇಳೆಯಲ್ಲಿ ರೈತರು ಮನೆ ಬಿಟ್ಟು ಹೊಲಗಳಲ್ಲಿ ಟೆಂಟ್ ಹಾಕಿ, ಕೈಯಲ್ಲಿ ಬ್ಯಾಟರಿ ಹಿಡಿದು ಹಂದಿ ಕಾಯುವುದೇ ಕಾಯಕವಾಗಿದೆ. ಕೆಂಪನಹಳ್ಳಿ ಪಕ್ಕದಲ್ಲೇ ಹಂದಿಗುಂದಿ ಅರಣ್ಯ ಪ್ರದೇಶ ಇದ್ದು, ಇಲ್ಲಿಂದ ಕಾಡು ಹಂದಿಗಳು ರಾತ್ರಿ ವೇಳೆ ರೈತರ ಜಮೀನುಗಳಿಗೆ ದಾಳಿ ಮಾಡುತ್ತಿವೆ.

ತಂತಿ ಬೇಲಿ ಮೊರೆ

ಕಾಡು ಹಂದಿಗಳು ತಂಡೋಪ ತಂಡವಾಗಿ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ಹೊಲದ ಸುತ್ತಲೂ ವಿದ್ಯುತ್ ಬೇಲಿ ಹಾಕಿದರೆ ಸಾಕು ಪ್ರಾಣಿಗಳು ಹಾಗೂ ಮನುಷ್ಯರ ಪ್ರಾಣ ಹಾನಿಯಾಗುವ ಆತಂಕ ಕಾಡುತ್ತಿದೆ. ಆದ್ದರಿಂದ ಬಣ್ಣಬಣ್ಣದ ಸೀರೆ ಕಟ್ಟುವುದು, ದೊಣ್ಣೆಗಳನ್ನು ನೆಟ್ಟು ಅದಕ್ಕೆ ತಂತಿ ಹಾಗೂ ದಾರ ಕಟ್ಟಿಕೊಂಡು ಜಮೀನಿನ ಸುತ್ತ ಬೇಲಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಅರಣ್ಯ ಇಲಾಖೆ ವಿಫಲ

ಕಾಡು ಹಂದಿ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ರೈತರ ಆರೋಪ. ಕಾಡು-ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡಬಹುದು. ಆದರೆ, ರೈತರು ಮಾತ್ರ ಬೆಳೆ ಉಳಿಸಿಕೊಳ್ಳಲು ಕಾಡು ಪ್ರಾಣಿಗಳನ್ನು ಹಿಮ್ಮೆಟ್ಟಿಸುವಾಗ ಕೊಲ್ಲುವಂತಿಲ್ಲ. ಇನ್ನಾದರೂ ಅರಣ್ಯ ಇಲಾಖೆ ಶೀಘ್ರವೇ ಕ್ರಮಕೈಗೊಂಡು ಕಾಡು ಹಂದಿಗಳ ಉಪಟಳ ತಪ್ಪಿಸಬೇಕಿದೆ.

ನಮ್ಮ ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಅರ್ಧದಷ್ಟು ಬೆಳೆ ತಿಂದು ನಾಶ ಪಡಿಸುತ್ತಿವೆ. ಅಲ್ಲದೇ ಕೆಲವೊಮ್ಮೆ ಗ್ರಾಮಕ್ಕೆ ನುಗ್ಗಿ ಜನರ ಮೇಲೆ ದಾಳಿ ಮಾಡಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಡು ಹಂದಿ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಸಮಪರ್ಕ ಮಳೆ ಇಲ್ಲದಿದ್ದರೂ ಸಾಲ ಮಾಡಿ ನಾವು ಬೆಳೆ ಬೆಳೆಯುತ್ತಿದ್ದೇವೆ. ತೆನೆ ಬಿಟ್ಟು ಕಟಾವು ಮಾಡಬೇಕಾದ ಸಮಯಕ್ಕೆ ಹಂದಿಗಳು ದಾಳಿ ಮಾಡುತ್ತಿವೆ.ಸುಮಂತ್, ರೈತ, ಬಾನಂದೂರುಬಾನಂದೂರು ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚುತ್ತಿದೆ. ಇವುಗಳನ್ನು ತಡೆಯಲು ಇಲಾಖೆಯಿಂದ ಕ್ರಮಕೊಳ್ಳಲಾಗುತ್ತಿದೆ. ಈಗ ಮಳೆ ಬಿದ್ದಿರುವ ಕಾರಣ ಅರಣ್ಯದಲ್ಲೆ ನೀರು, ಮೇವು ಸಿಗುತ್ತದೆ. ಹೆಚ್ಚಾಗಿ ಅರಣ್ಯ ಬಿಟ್ಟು ಹಂದಿಗಳು ಬರುವುದಿಲ್ಲ. ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾದರೆ ಇಲಾಖೆಯಿಂದ ಪರಿಹಾರ ಕೊಡಲಾಗುತ್ತದೆ.ಭೈರವ, ಉಪ ವಲಯ ಅರಣ್ಯಾಧಿಕಾರಿ, ಬಿಡದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net