

ಶನಿವಾರಸಂತೆ: ಮಾನವ-ವನ್ಯಜೀವಿ ಸಂಘರ್ಷ ತಡೆ ಕಾರ್ಯಕ್ರಮದಡಿಯಲ್ಲಿ ಶನಿವಾರಸಂತೆ ಅರಣ್ಯ ಇಲಾಖೆ ವತಿಯಿಂದ ಕಾಡಾನೆ ಹಾವಳಿ ಪೀಡಿತ ಗ್ರಾಮಗಳಲ್ಲಿ ರೈತರು, ಗ್ರಾಮಸ್ಥರಿಗೆ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಕುರಿತ ಅರಿವು ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯ ಮಾಲಂಬಿ-ದೊಡ್ಡೆರೆ ಗ್ರಾಮದಲ್ಲಿ ರೈತರು, ಗ್ರಾಮಸ್ಥರಿಗೆ ಶನಿವಾರಸಂತೆ ಅರಣ್ಯ ವಲಯದ ಆರ್‌ಎಫ್‌ಒ ಗಾನಶ್ರೀ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬೆಂಗಳೂರಿನ ಪಶುವೈದ್ಯಾಧಿಕಾರಿ ಮತ್ತು ರೇಡಿಯೋ ಕಾಲರ್ ತಜ್ಞ ಡಾ. ರುದ್ರಾದಿತ್ಯಾ ನೇತೃತ್ವದಲ್ಲಿ ಅರಣ್ಯದಿಂದ ಗ್ರಾಮದ ರೈತರ ಹೊಲ, ಗದ್ದೆ, ತೋಟಗಳಿಗೆ ನುಸುಳುವ ಕಾಡಾನೆಗಳನ್ನು ರೈತರು ಸರಳ ವಿಧಾನದ ಮೂಲಕ ತಡೆಗಟ್ಟುವ ಕುರಿತು ಶನಿವಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.
ಅರಣ್ಯದಿಂದ ರೈತರ ಕೃಷಿ ಜಮೀನುಗಳಿಗೆ ನುಸುಳುವ ಸ್ಥಳದಲ್ಲಿ ಗೋಣಿಚೀಲಕ್ಕೆ ವೇಸ್ಟ್ ಆಯಿಲ್ ಲೇಪಿಸಿ ರೈತರ ಹೊಲ, ತೋಟದ ಬೇಲಿಯ ಮೇಲೆ ಹಾಕುವ ವಿಧಾನ, ತಗಡಿನ ಡಬ್ಬದಲ್ಲಿ ತೆಂಗಿನಮಟ್ಟೆ, ಒಣನಾರುಗಳು, ಒಣ ಸಗಣಿ ಹಾಕಿ ವೇಸ್ಟ್ ಆಯಿಲ್‌ನ್ನು ಲೇಪಿಸಿ ಸ್ವಲ್ಪ ಹೊತ್ತು ತಗಡಿನ ಡಬ್ಬದಲ್ಲಿ ಬೆಂಕಿ ಹತ್ತಲು ಬಿಟ್ಟ ನಂತರ ಬೆಂಕಿಯನ್ನು ನಂದಿಸುವುದು, ಇದರಿಂದ ಗಂಟೆಗಟ್ಟಲೆ ಕಾಡಾನೆ ನುಸುಳುವ ಸ್ಥಳಗಳಲ್ಲಿ ಹೊಗೆಯಾಡುತ್ತದೆ. ಹೊಗೆಯ ವಾಸನೆಗೆ ಕಾಡಾನೆ ಸೇರಿದಂತೆ ಇತರ ವನ್ಯಜೀವಿಗಳು ಹೊಲ, ಗದ್ದೆಗೆ ನುಸಳಲು ಹಿಂದೇಟು ಹಾಕಿ ಕಾಡಿಗೆ ವಾಪಸಾಗುವ ಸಾಧ್ಯತೆ ಬಗ್ಗೆ ಪ್ರಯೋಗ ಮಾಡಲಾಯಿತು.
ಐದಾರು ಅಡಿಯ ಎತ್ತರದ ದೊಣ್ಣೆಗೆ ಒಣಮೆಣಸಿನಕಾಯಿ ಚೀಲದಲ್ಲಿ ಸುತ್ತುವುದು, ನಂತರ ಅದನ್ನು ಕಾಡಾನೆ ನುಸುಳುವ ಸ್ಥಳದಲ್ಲಿ ಅಳವಡಿಸಿದ ಬಳಿಕ ದೊಣ್ಣೆಯ ಕೆಳಭಾಗದಿಂದ ಬೆಂಕಿ ಹಾಕಿ ನಂದಿಸಬೇಕು. ಇದರಿಂದ ಖಾರ ಮಿಶ್ರಿತ ಘಾಟು ವಾಸನೆ ಸುತ್ತಮುತ್ತಲಿನ ಸ್ಥಳದಲ್ಲಿ ಹರಿದಾಡುತ್ತದೆ. ಈ ಘಾಟು ವಾಸನೆಗೆ ಕಾಡಾನೆ ಸೇರಿದಂತೆ ಯಾವುದೇ ವನ್ಯಜೀವಿಗಳು ಹೊಲ, ಗದ್ದೆಗಳಿಗೆ ನುಸುಳದು ಎಬುದನ್ನು ರೈತರಿಗೆ ಪ್ರಯೋಗದ ಮೂಲಕ ತೋರಿಸಲಾಯಿತು.
ರೈತರು ಸರಳ ಮತ್ತು ಕಡಿಮೆ ಖರ್ಚಿನ ತಂತ್ರಗಾರಿಕೆ ವಿಧಾನದ ಮೂಲಕ ಹೊಲ, ಗದ್ದೆಗಳಿಗೆ ಕಾಡಾನೆಗಳು ಬರುವುದನ್ನು ತಡೆಗಟ್ಟಬಹುದು. ಈ ಸರಳ ವಿಧಾನವನ್ನು ನೀವೆಲ್ಲರೂ ಪಾಲಿಸಿ ಮಾನವ-ವನ್ಯಜೀವಿ ಸಂಘರ್ಷ ಮತ್ತು ಬೆಳೆ ರಕ್ಷಣೆಯನ್ನು ಮಾಡಿಕೊಳ್ಳುವಂತೆ ಡಾ.ರುದ್ರದೀತ್ಯಾ ರೈತರಿಗೆ ತಿಳಿಸಿದರು.
ಆರ್‌ಎಫ್‌ಒ ಗಾನಶ್ರೀ ಸರಳ ವಿಧಾನವನ್ನು ನೀವು ಅನುಸರಿಸುವ ಮೂಲಕ ಮಾನವ ವನ್ಯಜೀವಿ ಸಂಘರ್ಷವನ್ನು ತಡೆಗಟ್ಟುವಂತೆ ರೈತರಿಗೆ ಮನವಿ ಮಾಡಿದರು.
ಎಡಳ್ಳಿ, ಹಿರಿಕರ ಮತ್ತು ನೀರುಗುಂದ ಗ್ರಾಮಗಳಲ್ಲಿಯೂ ಪ್ರಾತ್ಯಕ್ಷಿಕೆ ನೀಡಿ, ಕಾಡಾನೆಗಳ ತಡೆಗೆ ಅರಿವು ಮೂಡಿಸಲಾಯಿತು. ಉಪ ಅರಣ್ಯ ವಲಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕರಾದ ರಾಮಕೃಷ್ಣ, ಲೋಹಿತ್, ಅರಣ್ಯ ಇಲಾಖೆ ಸಿಬ್ಬಂದಿ ಭರತ್, ಹರ್ಷಿತ್, ಶಿವಾನಂದ್ ಹಾಜರಿದ್ದರು.