

ಬೇಲೂರು: ಅನ್ನ ನೀಡುವ ರೈತರು ಹಾಗೂ ಗಡಿ ಕಾಯುವ ಸೈನಿಕರಿಲ್ಲದಿದ್ದರೆ ನಾವು ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ರೈತರು ಮತ್ತು ಸೈನಿಕರನ್ನು ಗೌರವಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಎಚ್.ಕೆ.ಎಸ್ ಫೌಂಡೇಷನ್ ವತಿಯಿಂದ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ವಿದ್ಯಾರ್ಥಿಗಳ ಪಾಲಿನ ಪ್ರಮುಖ ಆಸ್ತಿ, ಪಾಲಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ವಿದ್ಯೆಯ ಜತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಗುರು ಹಿರಿಯರನ್ನು ಗೌರವಿಸುವಂತೆ ತಿಳಿ ಹೇಳಬೇಕು. ಅಲ್ಲದೆ ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಸದೃಢ ಸಮಾಜ ನಿರ್ಮಿಸುವತ್ತ ಮುಂದಾಗಬೇಕಿದೆ. ತಾಲೂಕಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಉತ್ತಮವಾಗಿದೆ. ಪ್ರತಿವರ್ಷ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿದ್ದು, ಇದು ಮುಂದುವರಿಯುತ್ತದೆ. ನಾನು ಕೂಡ ಬಡ ಕುಟುಂಬದಲ್ಲಿ ಹುಟ್ಟಿ, ಉನ್ನತ ವಿದ್ಯಾಭ್ಯಾಸ ಪಡೆಯುವ ಸಂದರ್ಭ ಪಟ್ಟ ಕಷ್ಟ ಮತ್ತೊಬ್ಬರಿಗೆ ಬರಬಾರದೆಂದು ನಮ್ಮ ಕುಟುಂಬದವರ ಸಲಹೆ ಮೇರೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ ಮತ್ತು ಇಂದು ನಾವೇನಾದರೂ ನೆಮ್ಮದಿ ಜೀವನ ನಡೆಸುತ್ತಿದ್ದೇವೆಂದರೆ ಅದಕ್ಕೆ ನಮ್ಮ ರೈತರು, ಸೈನಿಕರು ಕಾರಣ. ಆದ್ದರಿಂದ ಅವರನ್ನು ಇಂತಹ ಕಾರ್ಯಕ್ರಮದಲ್ಲಿ ಸ್ಮರಿಸುವ ಮತ್ತು ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಹಾಗೂ ವಿಶ್ವ ವಿಖ್ಯಾತ ಬೇಲೂರಿನಲ್ಲಿ ನಾವು ಇದ್ದೇವೆ ಎಂದರೆ ನಾವುಗಳೇ ಪುಣ್ಯವಂತರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಬ್ಬರು ವಿದ್ಯಾರ್ಥಿಗಳು 624 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಮತ್ತು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯಲು ಶಾಸಕ ಎಚ್.ಕೆ.ಸುರೇಶ್ ಮಾರ್ಗದರ್ಶನ ಕಾರಣ. ಅವರೂ ಸಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಯುವ ಜನತೆ ಅಂಕದ ಜತೆಗೆ ಸಂಸ್ಕಾರ ಬೆಳೆಸಿಕೊಂಡು ತಂದೆ, ತಾಯಿಯವರ ಮಮತೆ ಪಡೆದು ಅವರನ್ನು ಪೋಷಿಸಿದರೆ ಮಾತ್ರ ನೀವು ಪಡೆದ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದರು.
ಕೋಮಲಾ ಸುರೇಶ್, ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್, ಡಿಡಿಪಿಐ ಚಂದ್ರಶೇಖರ, ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಪ್ರದೀಪ್ ಸಾಗರ್, ತಾಲೂಕು ಅಧ್ಯಕ್ಷ ಧರ್ಮರಾಜ್, ಉಪನ್ಯಾಸಕರಾದ ಪೂರ್ಣಚಂದ್ರ, ಮಲ್ಲೇಶಗೌಡ ಇತರರಿದ್ದರು.