

ಕೆ.ಎಂ.ದೊಡ್ಡಿ: ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ರೈತರು ಬಲಿಯಾಗಿ ಸಹಕಾರಿ ಸಂಘಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಶಾಸಕ ಕದಲೂರು ಉದಯ್ ಕಿಡಿಕಾರಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನೈಸರ್ಗಿಕ ಕೃಷಿಕರ ಸಂಘದ ಸಹಯೋಗದೊಂದಿಗೆ ನೂತನವಾಗಿ ಆರಂಭಗೊಂಡಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳಲ್ಲಿ ಆಡಳಿತ ನಡೆಸುವವರು ಹಾಗೂ ಕಾರ್ಯನಿರ್ವಹಿಸುವವರು ಸರಿಯಾದ ಮಾರ್ಗದಲ್ಲಿ ಕಾರ್ಯನಿರ್ವಹಿಸಬೇಕು, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಹಕಾರಿ ಸಂಘಗಳು ಕರ್ತವ್ಯ ಲೋಪದಿಂದ ಸಂಘಗಳಲ್ಲಿ ಹಗರಣಗಳು ನಡೆದು ರೈತರಿಗೆ ತೊಂದರೆಯಾಗಿ ಸಂಘಗಳು ಮುಚ್ಚುವಂತಹ ಸ್ಥಿತಿಗೆ ಬಂದಿರುವ ನಿದರ್ಶನಗಳು ಕಣ್ಣು ಮುಂದಿದ್ದು ಸರಿಯಾದ ಸಮರ್ಥ ವ್ಯಕ್ತಿಯನ್ನು ಆಡಳಿತ ನಿರ್ವಹಣೆಗೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದ ರೈತರ ಕಲ್ಯಾಣಕ್ಕೆ ಕೃಷಿ ಸಹಕಾರ ಸಂಘಗಳ ಪಾತ್ರ ದೊಡ್ಡದಾಗಿದ್ದು ಸಂಘಗಳ ಅಭಿವೃದ್ಧಿಗೆ ರೈತರು ತಮ್ಮನ್ನು ತೋಡಗಿಸಿ ಕೊಳ್ಳಬೇಕು. ರೈತರು ಸಹಕಾರಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಪಡಿಸಬೇಕು ರೈತರಿಗೆ ಅನುಕೂಲಕರವಾಗುವಂತೆ ವಿವಿಧ ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸಲು ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರಿಯಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ರೈತರು ಸಹಕಾರಿ ಕ್ಷೇತ್ರಗಳಲ್ಲಿ ಪಡೆದ ಸಾಲ ಸೌಲಭ್ಯಗಳನ್ನು ನಿಗದಿತ ವೇಳೆಯಲ್ಲಿ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ರೈತರು ಸಹಕಾರಿ ಕ್ಷೇತ್ರದಲ್ಲಿ ಭಾಗವಹಿಸುವುದು ಅತ್ಯಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಸಂಘದ ಅಧ್ಯಕ್ಷ ಕೆ.ಶಿವಲಿಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾ.ಪಂ. ಮಾಜಿ ಅಧ್ಯಕ್ಷ ಕಪನಿಗೌಡ, ತೋಟಗಾರಿಕೆ ಇಲಾಖೆ ಸಚಿವರ ಹಿರಿಯ ಆಪ್ತ ಸಹಾಯಕ ಎಸ್.ಮಾದಯ್ಯ, ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಧಾಕರ್, ಮುಖಂಡರಾದ ಚಿದಂಬರ ಮೂರ್ತಿ, ಅಮಿನ್ ಶಿವಲಿಂಗಯ್ಯ, ಸಂಘದ ಉಪಾಧ್ಯಕ್ಷ ಬಿ.ರುದ್ರಸ್ವಾಮಿ, ನಿರ್ದೇಶಕರಾದ ಪುಟ್ಟಸ್ವಾಮಿ, ಮಹೇಂದ್ರ, ಪುಟ್ಟ ಅಂಕೆಗೌಡ, ನಂಜುಂಡಪ್ಪ, ವೀರಭದ್ರ, ಚೆಲುವರಾಜು, ಮಹೇಶ್ ಕುಮಾರ್, ಸಣ್ಣಮ್ಮ, ಭಾಗ್ಯ, ಮಧುಸೂದನ್ ಇತರರು ಇದ್ದರು.