ಹೊಸ ಪ್ರಯೋಗಗಳಿಂದ ಯಶಸ್ಸು ಕಂಡ ರೈತ

Negilayogi4
Published on

* ಮಾದರಿಯಾದ ವಿಠಲೇನಹಳ್ಳಿಯ ಕೃಷಿಕ ರಾಘವೇಂದ್ರ

* ಕೃಷಿ ಇಲಾಖೆ, ಜಿಕೆವಿಕೆ ಅಧಿಕಾರಿಗಳಿಂದ ಮಾರ್ಗದರ್ಶನ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಶ್ರಮ ಹಾಗೂ ಬಂಡವಾಳಕ್ಕೆ ತಕ್ಕ ಲಾಭ ಬರುವುದಿಲ್ಲವೆಂಬ ಮಾತು ಎಲ್ಲೆಡೆ ಸಾಮಾನ್ಯ. ಇದರ ಮಧ್ಯೆ ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗುವವರು ತೀರಾ ವಿರಳ. ಆದರೆ, ತಾಲೂಕಿನ ಯುವ ರೈತನೊರ್ವ ತನ್ನದೇ ಆದ ಆಲೋಚನೆಯಲ್ಲಿ ಕೃಷಿ ಕಾಯಕ ನಡೆಸುತ್ತ ಯಶಸ್ವಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ.

ಹೌದು.. ನೀರಾ ಚಳವಳಿಗೆ ಮುಖ್ಯ ಭೂಮಿಕೆಯಾದ ತಾಲೂಕಿನ ವಿಠಲೇನಹಳ್ಳಿಯ ವಿ.ಎಚ್. ರಾಘವೇಂದ್ರಗೆ ಬಾಲ್ಯದಿಂದಲೂ ಕೃಷಿ ಬಗ್ಗೆ ಅಪರಿಮಿತ ಪ್ರೀತಿ. ಇವರ ತಂದೆ ಹೊಂಬಾಳೇಗೌಡರು ಕೃಷಿಕರಾಗಿದ್ದು, ರೈತ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಂದೆಯ ಹಾದಿಯಲ್ಲೇ ನಡೆದ ರಾಘವೇಂದ್ರ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ರಾಘವೇಂದ್ರಗೆ ಪತ್ನಿ ಪೂರ್ಣಿಮಾ ಸಾಥ್ ನೀಡುತ್ತಿದ್ದಾರೆ.

9 ಎಕರೆ ಜಮೀನಿದ್ದು, ನಾಲ್ಕು ಎಕರೆಯಲ್ಲಿ ತೆಂಗು, ಅಡಕೆ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಮಹಾಗನಿ, ಮುಕ್ಕಾಲು ಎಕರೆ ಜಾಗದಲ್ಲಿ ನುಗ್ಗೆಕಾಯಿ ಬೆಳೆ, ಒಂದೂವರೆ ಎಕರೆಯಲ್ಲಿ ಡ್ರ್ಯಾಗನ್ ್ರೂಟ್, ಒಂದು ಎಕರೆಯಲ್ಲಿ ಬಟರ್ ಫ್ರೂಟ್ (ಬೆಣ್ಣೆಹಣ್ಣು) ಬೆಳೆದಿದ್ದಾರೆ. ಇದರೊಂದಿಗೆ ಮಾವು ಸೇರಿ ಹಲವು ಬೆಳೆ ಜಮೀನಿನಲ್ಲಿವೆ. ಸಮಗ್ರ ಬೇಸಾಯಕ್ಕೆ ಹೆಚ್ಚು ಒತ್ತು ನೀಡಿರುವುದೆ ಕೃಷಿ ಸಾಧನೆಗೆ ಕಾರಣವಾಗಿದೆ. ತಂದೆಯ ಜತೆಗೆ ಕೃಷಿ ಇಲಾಖೆ ಹಾಗೂ ಜಿಕೆವಿಕೆ ಅಧಿಕಾರಿಗಳ ಮಾರ್ಗದರ್ಶನ ಪಾಲಿಸುತ್ತ ಬಂದಿರುವ ಇವರಿಗೆ ಪತ್ನಿ ಪೂರ್ಣಿಮಾ ಬೆಂಬಲವಾಗಿ ನಿಂತಿದ್ದಾರೆ. ಓದಿರುವುದು 9ನೇ ತರಗತಿಯಾದರೂ, ಕೃಷಿಯೊಂದಿಗಿನ ನಂಟು ಬದುಕಿನ ದಾರಿ ತೋರಿದೆ.

ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಸೈ 

ಈ ಭಾಗದಲ್ಲಿ ತೀರಾ ವಿರಳ ಎನ್ನಲಾಗುವ ಡ್ರ್ಯಾಗನ್ ಫ್ರೂಟ್ಸ್ ಬೆಳೆಯುವ ಮೂಲಕ ರಾಘವೇಂದ್ರ ಸೈ ಎನಿಸಿಕೊಂಡಿದ್ದಾರೆ. ಕೃಷಿಯಲ್ಲಿ ಯಾವುದಾದರೂ ಹೊಸ ಪ್ರಯೋಗ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ರಾಘವೇಂದ್ರ 2022ರಲ್ಲಿ ಒಂದೂವರೆ ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಫಸಲು ತೆಗೆದಿದ್ದಾರೆ. ಗಿಡ ಹಾಗೂ ಕಲ್ಲಿನ ಕಂಬ ಸೇರಿ ಗಿಡವೊಂದಕ್ಕೆ 250 ರೂ. ಬಂಡವಾಳ ಹೂಡಿದ್ದು, ಕಳೆದ ಎರಡು ವರ್ಷಗಳಿಂದ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಹಾಪ್‌ಕಾಮ್ಸ್ ಸೇರಿ ಇನ್ನಿತರ ಮಾರುಕಟ್ಟೆಗಳಲ್ಲಿ ಬಿಕರಿ ಮಾಡುತ್ತಿದ್ದಾರೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

ಕಡಿಮೆ ತೇವಾಂಶವಿರುವ ಒಣ ಭೂಮಿಯೇ ಈ ಬೆಳೆಗೆ ಸೂಕ್ತ ಎಂಬುದನ್ನು ಅರಿತು ಈ ಭಾಗದಲ್ಲಿ ಹೊಸ ಬೆಳೆ ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಲಾಭ ಕಂಡುಕೊಂಡಿದ್ದಾರೆ. ಇದರೊಂದಿಗೆ, ವರ್ಷದಲ್ಲಿ ಎರಡು ಬೆಳೆ ಬರುವ ಬಟಟ್ ್ರೂಟ್ (ಬೆಣ್ಣೆಹಣ್ಣು) ನಲ್ಲಿಯೂ ಉತ್ತಮ ಇಳುವರಿ ಕಂಡಿದ್ದಾರೆ. ಅರಣ್ಯ ಕೃಷಿಯೂ ಇವರ ಬತ್ತಳಿಕೆಯಲ್ಲಿದ್ದು, ತೇಗ, ತುರುಬೇವು ಸೇರಿ ಹಲವು ಮರ ಬೆಳೆಸುತ್ತಿದ್ದಾರೆ. ಈಗಾಗಲೇ ನೂರಾರು ಮರಗಳನ್ನು ಬಿಕರಿ ಮಾಡಿ ಲಾಭ ಕಂಡಿದ್ದಾರೆ.

ಉದ್ಯಮಕ್ಕೂ ದಾಪುಗಾಲು

ಕೃಷಿ ಉತ್ಪನ್ನಗಳ ಉದ್ಯಮಕ್ಕೂ ದಾಪುಗಾಲು ಇಟ್ಟಿದ್ದಾರೆ. ಪತ್ನಿ ಪೂರ್ಣಿಮ ಇದಕ್ಕಾಗಿ ಸೂಕ್ತ ತರಬೇತಿ ಪಡೆದಿದ್ದು, ಗ್ರಾಮದ ಸಮೀಪದ ಬಿ.ವಿ.ಹಳ್ಳಿ ಗ್ರಾಮದಲ್ಲಿ ಎಣ್ಣೆಮಿಲ್ ಸ್ಥಾಪಿಸಿದ್ದಾರೆ. ಇದರೊಂದಿಗೆ, ಕೃಷಿಕ ುಡ್ ಪ್ರಾಡಕ್ಟ್ ಎಂಬ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿಕೊಂಡು ಗಾಣದಿಂದ ತೆಗೆದ ಎಣ್ಣೆಗಳು, ಮಾಸಾಲ ಪದಾರ್ಥಗಳು, ಪುಳಿಯೋಗರೆ ಸೇರಿ ವಿವಿಧ ಪುಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ತಂದೆ ಕೃಷಿಕರು ಹಾಗೂ ರೈತ ಹೋರಾಟಗಾರರಾಗಿದ್ದು, ಚಿಕ್ಕ ವಯಸ್ಸಿನಿಂದಲ್ಲೂ ಕೃಷಿಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದೆ. ಅದಾಯ ಕಾಣಬಹುದಾದ ಬೇಸಾಯ ಯಾವುದು ಎಂದು ಯೋಚನೆ ಮಾಡಿದಾಗ ಡ್ರ್ಯಾಗಣರ್ರ್ ಫ್ರೂಟ್ ಸೇರಿ ಇತರ ಬೆಳೆ ಬೆಳೆಯುವ ಮನಸ್ಸು ಮಾಡಿದೆ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ನನ್ನ ಕೃಷಿ ಕಾಯಕಕ್ಕೆ ಪತ್ನಿಯೂ ಬೆನ್ನೆಲುಬಾಗಿದ್ದಾರೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿದ್ದರೆ ಕೃಷಿಗಿಂತ ಮತ್ತೊಂದು ಕೆಲಸವಿಲ್ಲ.ರಾಘವೇಂದ್ರ ರೈತ ವಿಠಲೇನಹಳ್ಳಿಸಂಪರ್ಕ ಸಂಖ್ಯೆ:: 9980822066
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net