

* ಸಮಗ್ರ ಬೇಸಾಯದಿಂದ ಬದುಕು ಕಟ್ಟಿಕೊಂಡ ಹೊಸೂರಿನ ಬಾಲಕೃಷ್ಣ
ಚೇತನ್ ಚಕ್ಕೆರೆ ಬಿಡದಿ
ಭಾರತದ ಬಹುಪಾಲು ಜನಸಂಖ್ಯೆಗೆ ಕೃಷಿ ಜೀವನೋಪಾಯದ ಸಾಧನವಾಗಿದೆ. ಕರೊನಾ ಬಳಿಕ ಅದೆಷ್ಟೋ ಮಂದಿ ಸ್ವಗ್ರಾಮಗಳಿಗೆ ತೆರಳಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಅಂತೆಯೇ, ಇಲ್ಲೊಬ್ಬ ರೈತ ಸಮಗ್ರ ಬೇಸಾಯದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಹೌದು, ಹೊಸೂರು ಗ್ರಾಮದ ರೈತ ಬಾಲಕೃಷ್ಣ ಕೃಷಿಯಿಂದಲೇ ಉತ್ತಮ ಕಟ್ಟಿಕೊಂಡಿದ್ದಾರೆ. ಬೇಸಾಯದಿಂದ ರೈತರಿಗೆ ನಷ್ಟವಾಗುವುದಿಲ್ಲ. ಆದರೆ, ವೈಜ್ಞಾನಿಕತೆ ಹಾಗೂ ತಾಂತ್ರಿಕತೆ ರೂಢಿಸಿಕೊಂಡು ವ್ಯವಸಾಯ ಮಾಡಬೇಕು ಎನ್ನುತ್ತಾರೆ ಬಾಲಕೃಷ್ಣ.
ರೇಷ್ಮೆ ನಾಡಿನಲ್ಲಿದ್ದುಕೊಂಡು ರೇಷ್ಮೆ ಬೆಳೆಯದೆ ಇದ್ದರೆ ಹೇಗೆ ಎಂದುಕೊಂಡ ಇವರು 80/31 ಅಡಿ ರೇಷ್ಮೆ ಮನೆ ನಿರ್ಮಾಣ ಮಾಡಿಕೊಂಡು 30 ವರ್ಷಗಳಿಂದ ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಕೃಷಿಯಲ್ಲಿ ಜಪಾನ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ಪ್ರಸ್ಸಿಂಗ್ ಮಾಡಲಾದ ಚಂದ್ರಿಕೆಯನ್ನು ಕ್ರಿಮಿನಾಶಕ ಸಿಂಪಡಿಸಿ ತೊಳೆದು, ಮತ್ತೆ ಪ್ರಸಿಂಗ್ ಮಾಡಿ ಬಂಡಲ್ ಕಟ್ಟಿ ಇಡುತ್ತಾರೆ.
ಇವರು ಬೈವೋಲ್ಟನ್ ತಳಿ (ಬಿಳಿ) ರೇಷ್ಮೆ ಬೆಳೆಯುತ್ತಾರೆ. ಹಾಗಾಗಿ ಈ ಗೂಡಿಗೆ ಪ್ರಸ್ಸಿಂಗ್ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಚಾಕಿ ಸಾಕಾಣಿಕೆ ಕೇಂದ್ರದಿಂದ ಹುಳುಗಳನ್ನು ತರುವುದಿಲ್ಲ. ದುಬಾರಿ ಹಣ ಕೊಟ್ಟು ಚಾಕಿ ಕೇಂದ್ರದಿಂದ ಹುಳು ತಂದು ಸಾಕಾಕಿದರೆ ಲಾಭ ಸಿಗುವುದಿಲ್ಲ ಎಂದು ರೇಷ್ಮೆ ಇಲಾಖೆಯಿಂದ ಮೊಟ್ಟೆ ತಂದು ತಂಪಾದ ವಾತಾವರಣದಲ್ಲಿಟ್ಟು ಮರಿ ಮಾಡಿಸಿ ರೇಷ್ಮೆ ಗೂಡು ಉತ್ಪಾದಿಸುತ್ತಿದ್ದಾರೆ.
ಪ್ರಸ್ತುತ ಒಂದು ಉದ್ಯಮ ನಂಬುವುದು ಕಷ್ಟ. ಒಂದಲ್ಲ ಒಂದು ನಮಗೆ ಆದಾಯ ತಂದು ಕೊಡಬೇಕು. ಈ ನಿಟ್ಟಿನಲ್ಲಿ ಕೋಳಿ ಫಾರ್ಮ್ ನಿರ್ಮಾಣ ಮಾಡಿ ಕೋಳಿ ಸಾಕಣೆ ಕೂಡ ಮಾಡುತ್ತಿದ್ದಾರೆ. ದೊಡ್ಡ ವಿಸ್ತೀರ್ಣವಾದ ಕೋಳಿ ಮನೆಗಳನ್ನು ನಿರ್ಮಾಣ ಮಾಡಿರುವ ಇವರು ಒಂದು ಬಾರಿಗೆ 10,000 ಸಾವಿರ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಕೋಳಿ ಫಾರ್ಮ್‌ನಲ್ಲಿ ಕೂಡ ವೈಜ್ಞಾನಿಕತೆ ಬಳಸಿಕೊಳ್ಳಲಾಗಿದೆ. ಇತ್ತೀಚೆಗೆ ಕೆಲಸಕ್ಕೆ ದಿನಗೂಲಿ ನೌಕರರು ಸಿಗುವುದು ಕಷ್ಟವಾಗಿದೆ, ಹಾಗಾಗಿ ಕೆಲಸಗಾರರ ಸಂಖ್ಯೆ ಕಡಿಮೆ ಮಾಡಿಕೊಂಡು ತಂತ್ರಜ್ಞಾನ ಬಳಸಿಕೊಂಡು ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ.
ಬಾಲಕೃಷ್ಣ ಅವರಿಗೆ 7 ಎಕರೆ ಜಮೀನಿದ್ದು, ಕೊಳವೆಬಾವಿಗಳ ನೆರವಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ನೀರು ಹಾಗೂ ವಿದ್ಯುತ್ ಅಭಾವದ ಹಿನ್ನೆಲೆಯಲ್ಲಿ ಈ ಪದ್ಧತಿ ವರದಾನವಾಗಿದೆ. ಇದರಿಂದ ಕಾರ್ಮಿಕರ ಅವಲಂಬನೆ ಕಡಿಮೆಯಾಗುವ ಜತೆಗೆ ನೀರು ವ್ಯರ್ಥವಾಗುವುದಿಲ್ಲ. ನೀರು ಸಂಗ್ರಹಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅನುದಾನ ಬಳಸಿಕೊಂಡು ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಬೋರ್‌ವೆಲ್ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಣೆ ಮಾಡಿಕೊಂಡು ನಂತರ ಹನಿ ನೀರಾವರಿ ಮೂಲಕ ಬೆಳೆಗಳಿಗೆ ಪೂರೈಸಲಾಗುತ್ತಿದೆ.
ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದು, ತೆಂಗು, ಬಾಳೆ, ಜೋಳ, ರೇಷ್ಮೆ ಕಡ್ಡಿಯನ್ನು ಬೆಳೆದಿದ್ದಾರೆ. ತೆಂಗು ಬೆಳೆಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಆದಾಯ ಕಾಣುತ್ತಿದ್ದಾರೆ. ಬಾಳೆ ಗಿಡಗಳನ್ನೂ ಹಾಕಿದ್ದಾರೆ, ಬೇಬಿ ಕಾರ್ನ್ ಹಾಕಿದ್ದು, ಇದು ಕೂಡ ಆದಾಯ ಹೆಚ್ಚಿಸಿದೆ. ಬೇಬಿ ಕಾರ್ನ್ ಬಿಡಿಸಿ ಮಾರಾಟ ಮಾಡಲಾಗುತ್ತದೆ. ಇದಾದ ನಂತರ ಜೋಳವನ್ನು ರಾಸುಗಳ ಮೇವಿಗಾಗಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ.
ಕೃಷಿಯನ್ನು ಒಂದು ಉದ್ದಿಮೆಯಾಗಿ ಮಾಡಬೇಕು. ತಂತ್ರಜ್ಞಾನ ಹಾಗೂ ತಾಂತ್ರಿಕತೆ ಬಳಸಿಕೊಂಡು ಕೃಷಿ ಮಾಡಿದಾಗ ಲಾಭ ಕಾಣಬಹುದು. ಹಲವು ರೈತರಿಗೆ ನಾನು ಮಾಡುತ್ತಿರುವ ಕೃಷಿ ಹಾಗೂ ರೇಷ್ಮೆ ಹುಳು ಸಾಕಣೆ ಬಗ್ಗೆ ಅವರ ತೋಟಕ್ಕೆ ಹೋಗಿ ಹೇಳಿಕೊಟ್ಟರೂ ಬದಲಾವಣೆ ಮಾಡಿಕೊಳ್ಳುವುದಿಲ್ಲ. ರೈತನಾದವನು ಕೂಲಿ ಕೆಲಸಗಾರರ ಮೇಲೆ ಅವಲಂಬಿತವಾಗದೆ ವ್ಯವಸಾಯದಲ್ಲಿ ಆಸಕ್ತಿ ತೋರಿಸಿ ತೋಟದಲ್ಲಿ ಕೆಲಸ ಮಾಡಿದಾಗ ಖಂಡಿತ ಯಶಸ್ಸು ಸಿಗುತ್ತದೆ.
ಬಾಲಕೃಷ್ಣ, ಹೊಸೂರು
ಬಾಲಕೃಷ್ಣ ಅವರ ಸಮಗ್ರ ಬೇಸಾಯವನ್ನ ಗುರುತಿಸಿ ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಅವರನ್ನು ಮಾದರಿ ರೈತ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೊ. ನಂ.- 9901988002 ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಿ.