ಮಿಶ್ರ ಕೃಷಿಯಲ್ಲಿ ಖುಷಿ ಕಂಡ ರೈತ

Rmgm-Ph-05-Negila Yogi-Story Photo-Huruli Thota-19-10-2024
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮಾವು, ತೆಂಗು, ಅಡಕೆ ಕೃಷಿ ಜತೆಗೆ ತರಕಾರಿ, ರೇಷ್ಮೆ ಹೈನುಗಾರಿಕೆಯನ್ನೂ ಕೈಗೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ ರಾಮನಗರ ತಾಲೂಕಿನ ಕೂಟಗಲ್​ ಹೋಬಳಿಯ ಅಕ್ಕೂರು ಗ್ರಾಮದ ರೈತ ಬೆಟ್ಟಸ್ವಾಮಿ.

ಬೆಟ್ಟಸ್ವಾಮಿ ಅವರಿಗೆ ಸುಮಾರು ಹದಿನೈದು ಎಕರೆ ಜಮೀನಿದ್ದು, ಸಮಗ್ರ ಕೃಷಿ ಅನುಸರಿಸಿ ತರಕಾರಿ ಬೆಳೆಯುವ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಜಮೀನಿನಲ್ಲಿ ತೆಂಗು, ಅಡಕೆ ಬೆಳೆಗಳಿವೆ. ಕೃಷಿಗೆ ಕುಟುಂಬ ಬೆನ್ನೆಲುಬಾಗಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ಪಪ್ಪಾಯ, ಬಾಳೆ, ರೇಷ್ಮೆ, ಬೀನ್ಸ್​, ಟೊಮ್ಯಾಟೊ, ಬದನೆ, ಮೂಲಂಗಿ, ಮೆಣಸು, ವೀಳ್ಯದೆಲೆ, ರಾಗಿ ಹೀಗೆ ವಿವಿಧ ಬೆಳೆಗಳ ಜತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಣೆ ಮೂಲಕ ಕೃಷಿಯಲ್ಲಿ ಲಾಭ ಕಾಣುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಕೊಟ್ಟಿಗೆ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟಿರುವ ಇವರು, ಉತ್ತಮ ರೀತಿಯಲ್ಲಿ ತೋಟ ನಿರ್ವಹಣೆ ಮಾಡಿ ತರಕಾರಿ, ರೇಷ್ಮೆ ಬೆಳೆಯಲ್ಲಿ ಲಾಭ ಕಂಡುಕೊಂಡಿದ್ದಾರೆ.

ಕೈ ಹಿಡಿದ ತರಕಾರಿ ಬೆಳೆಗಳು

ಬೆಟ್ಟಸ್ವಾಮಿ ಕಾಲಕ್ಕೆ ತಕ್ಕಂತೆ ತರಕಾರಿ ಬೆಳೆಯುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಆಯಾ ಕಾಲಕ್ಕೆ ತಕ್ಕಂತೆ ಟೊಮ್ಯಾಟೊ, ಬೀನ್ಸ್​, ಮೆಣಸಿಕಾಯಿ ಮತ್ತಿತರ ತರಕಾರಿ ಬೆಳೆ ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ. ಒಂದು ಬಾರಿ ಮೂರ್ನಾಲ್ಕು ರೀತಿಯ ತರಕಾರಿ ಬೆಳೆಯಲು ಪ್ರಾರಂಭಿಸಿ ಒಂದರಲ್ಲಿ ಲಾಭ ಸಿಗದಿದ್ದರೂ ಮತ್ತೊಂದರಲ್ಲಿ ಲಾಭ ಸಿಗುವ ಲೆಕ್ಕಾಚಾರ ಅವರದು.

ಹೊಸ ಬೆಳೆಗೆ ಆದ್ಯತೆ

ಬೆಳೆದ ಬೆಳೆಗಳನ್ನೇ ಬೆಳೆಯುವ ಬದಲು ಪ್ರತಿ ಬಾರಿ ಒಂದೊಂದು ಬೆಳೆ ಬದಲಾಯಿಸುತ್ತಾ ಭೂಮಿಯ ಫಲವತ್ತತೆಗೆ ಪ್ರಾಮುಖ್ಯ ಕೊಟ್ಟು ನಷ್ಟದ ಹಾದಿ ತುಳಿಯದಂತೆ ಎಚ್ಚರ ವಹಿಸಿದ್ದಾರೆ.

48 ಬೋರ್​ವೆಲ್​

15 ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯದಲ್ಲಿ ಬೆಳೆ ಬೆಳೆಯಬೇಕೆಂಬ ಇವರ ಹಂಬಲಕ್ಕೆ ಜಮೀನಿನಲ್ಲಿ ಇದುವರೆಗೂ 48 ಬೋರ್​ ಕೊರೆಸಿದ್ದಾರೆ. ಆದರೆ, ಇವರಿಗೆ ಪ್ರಸ್ತುತ 4 ಬೋರ್​ವೆಲ್​ಗಳಲ್ಲಿ ಮಾತ್ರ ಉತ್ತಮ ನೀರು ಸಿಗುತ್ತಿದೆ. ಇದರಿಂದ ಕೃಷಿಗೆ ಅನುಕೂಲವಾಗಿದೆ ಎನ್ನುತ್ತಾರೆ ರೈತ ಬೆಟ್ಟಸ್ವಾಮಿ.

ನೀರಿನ ಬರ ನೀಗಿಸಿದ ಕೃಷಿಹೊಂಡ

ಜಮೀನಿನಲ್ಲಿ ದೊಡ್ಡದಾದ ಒಂದು ಕೃಷಿಹೊಂಡ ಚಿಕ್ಕ ಕೃಷಿಹೊಂಡ ನಿರ್ಮಾಣ ಮಾಡಿದ್ದು, ವಿದ್ಯುತ್​ ಸರಬರಾಜು ದಿನದ 24 ಗಂಟೆ ಇಲ್ಲದಿರುವ ಕಾರಣ ವಿದ್ಯುತ್​ ಇರುವ ವೇಳೆಯಲ್ಲಿ ಬೋರ್​ವೆಲ್​ಗಳಿಂದ ಕೃಷಿಹೊಂಡಕ್ಕೆ ನೀರು ಶೇಖರಣೆ ಮಾಡಿಕೊಳ್ಳುತ್ತಾರೆ. ಆ ಮೂಲಕ ತರಕಾರಿ ಮತ್ತಿತರ ಬೆಳೆಗಳಿಗೆ ನೀರೊದಗಿಸಿಕೊಳ್ಳುತ್ತಾರೆ. ಜತೆಗೆ ಹನಿ ನೀರಾವರಿ ಮೂಲಕ ನೀರನ್ನು ಮಿತವಾಗಿ ಬಳಸಿ ಉತ್ತಮ ವ್ಯವಸಾಯ ಮಾಡುತ್ತಿದ್ದಾರೆ.

ಕೈ ಹಿಡಿದ ಹೈನುಗಾರಿಕೆ

ರೈತ ಬೆಟ್ಟಸ್ವಾಮಿ ಹೈನುಗಾರಿಕೆಯತ್ತಲೂ ವಾಲಿದ್ದು ಉತ್ತಮ ಹಾಲು ಕರೆಯುವ 8 ಮಿಶ್ರತಳಿ ಹಸುಗಳನ್ನು ಸಾಕಣೆ ಮಾಡಿ, ಪ್ರತಿದಿನ 100 ಲೀಟರ್​ ಹಾಲು ಉತ್ಪಾದಿಸುತ್ತಿದ್ದಾರೆ. ಇದರ ಜತೆಗೆ ಮೇಕೆ, ಕುರಿ ಸಾಕಿದ್ದಾರೆ.

ಹಣ್ಣಿನ ಗಿಡ

ಅಡಕೆ, ತೆಂಗು, ಮಾವು, ತರಕಾರಿ, ಜೋಳ, ತೊಗರಿ, ಜಾನುವಾರು ಮೇವು ಕೃಷಿ ಜತೆಗೆ ಸಫೋಟ, ಸೀಬೆ, ದಾಳಿಂಬೆ, ಮೋಸಂಬಿ, ಸೇಬು ಇನ್ನಿತರ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಅಲ್ಲದೆ, 20 ಗುಂಟೆ ಜಮೀನಿನಲ್ಲಿ ಹಾರಕ (ಸಿರಿಧಾನ್ಯ) ಬೆಳೆದು ಎಲ್ಲ ಕೃಷಿಗೂ ಸೈ ಎಂದಿದ್ದಾರೆ.

ಮೀನು ಸಾಕಣೆ

ಜಮೀನಿನಲ್ಲಿರುವ ಕೃಷಿಹೊಂಡದಲ್ಲಿ ವರ್ಷಪೂರ್ತಿ ನೀರು ಇರುವಂತೆ ಮಾಡಿರುವ ಇವರು ಪ್ರತಿಬಾರಿ 5 ರಿಂದ 6 ಸಾವಿರ ಮೀನು ಸಾಕಾಣಿಕೆ ನಡೆಸುತ್ತಾ ಬಂದಿದ್ದಾರೆ. ಉತ್ತಮ ಆದಾಯ ಮೀನು ಕೃಷಿಯಲ್ಲೂ ಕೈ ಸೇರುತ್ತಿದೆ.

ಪರಿಶ್ರಮ ಇದ್ದರಷ್ಟೇ ಕೃಷಿಯಲ್ಲಿ ಖುಷಿ ಕಾಣಬಹುದು. ಬರಿ ಲಾಭದತ್ತ ಮುಖ ಮಾಡಿದರೆ ಯಶಸ್ಸು ಸಿಗುವುದಿಲ್ಲ. ಆಧುನಿಕ ವೈಜ್ಞಾನಿಕ ಪದ್ಧತಿ ಅನುಸರಿಸಿ ಬೆಳೆ ಬೆಳೆಯಲು ಮುಂದಾಗಬೇಕು. ನಮ್ಮ ಕುಟುಂಬ ನಮ್ಮ ಕೃಷಿಗೆ ಬೆನ್ನೆಲುಬಾಗಿದೆ. ತರಕಾರಿ, ರೇಷ್ಮೆ ಬೆಳೆಗಳು ನನ್ನ ಕೈಹಿಡಿದಿವೆ. ಜತೆಗೆ ಹೈನುಗಾರಿಕೆ ನನ್ನ ಜೀವನ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ. ಬೆಟ್ಟಸ್ವಾಮಿ, ರೈತ, ಅಕ್ಕೂರು.
ಬೆಟ್ಟಸ್ವಾಮಿ ಪ್ರಗತಿಪರ ಮಾದರಿ ಕೃಷಿಕರಾಗಿದ್ದು, ಹೊಸ ಹೊಸ ಬೆಳೆಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಪದ್ದತಿಯಲ್ಲಿ ತರಕಾರಿ ಸೇರಿ ಪಪ್ಪಾಯ, ಬಾಳೆ ಇನ್ನಿತರ ತೋಟದ ಬೆಳೆ ಬೆಳೆದು ಕೃಷಿಯಲ್ಲಿ ಲಾಭದತ್ತ ಮುಖ ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಕಾಲಕಾಲಕ್ಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಸವಲತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿ ಅವರ ಕೃಷಿಗೆ ಉತ್ತೇಜನ ನೀಡುತ್ತಿದೆ.ರಾಮಮೂರ್ತಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಅಧಿಕಾರಿ, ರಾಮನಗರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net