ದುಡಿಮೆಯ ಅರ್ಧಭಾಗ ಸಮಾಜಸೇವೆಗೆ ಅರ್ಪಿಸುವ ರೈತ

20231118_090108
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ವ್ಯವಸಾಯ ಎಂದರೆ, ನೀ ಸಾಯ, ನಿನ್ನ ಮನೆ ಮಂದಿಯೆಲ್ಲ ಸಾಯ ಎಂಬ ಮಾತಿದೆ. ಈ ಮಾತಿಗೆ ಅಪವಾದ ಎಂಬಂತೆ ತಾಲೂಕಿನ ರೈತರೊಬ್ಬರು ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಜತೆಗೆ ದುಡಿಮೆಯಿಂದ ಬಂದ ಅರ್ಧ ಹಣವನ್ನು ಸಮಾಜ ಸೇವೆಗೆ ಅರ್ಪಿಸುವ ಮೂಲಕ ಮಾದರಿ ಹಾಗೂ ಸಮಾಜಮುಖಿ ರೈತ ಎನಿಸಿಕೊಂಡಿದ್ದಾರೆ.

ಗ್ರಾಮದ ಜನರಿಂದ ಪ್ರೀತಿಯಿಂದ ಶೇಠು ಎಂದು ಕರೆಸಿಕೊಳ್ಳುವ ತಾಲೂಕಿನ ವಳಗೇರದೊಡ್ಡಿ ಗ್ರಾಮದ ಚಿಕ್ಕರಾಜು ಅವರೇ ಮಾದರಿ ರೈತ. ಗ್ರಾಮದ ದಿವಂಗತ ಗೌರಮ್ಮ ಹಾಗೂ ಕೆಂಪೇಗೌಡ ಎಂಬುವವರ ಪುತ್ರನಾದ ಚಿಕ್ಕರಾಜು ಅವರಿಗೆ ಬಾಲ್ಯದಿಂದಲೂ ಕೃಷಿ ಎಂದರೆ ಪಂಚಪ್ರಾಣ. ಇರುವ ಪಿತ್ರಾರ್ಜಿತ ಜಮೀನು ಸೇರಿ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದುಕೊಂಡಿರುವ ಚಿಕ್ಕರಾಜು ಶ್ರಮವಹಿಸಿ ದುಡಿಮೆ ನಡೆಸುತ್ತಿದ್ದಾರೆ. ಹೈನುಗಾರಿಕೆ ಹಾಗೂ ರೇಷ್ಮೆ ಇವರ ಪ್ರಮುಖ ಕಸುಬಾಗಿದ್ದು, ಆಧುನಿಕ ವಿಧಾನಗಳನ್ನು ಅನುಸರಿಸುವ ಮೂಲಕ ಈ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಕೈ ಹಿಡಿದ ಹೈನುಗಾರಿಕೆ!

ಚಿಕ್ಕರಾಜು ಅವರ ಬಳಿ 9 ರಾಸುಗಳಿದ್ದು, ಪ್ರತಿನಿತ್ಯ 70 ಲೀಟರ್​ ಹಾಲು ಉತ್ಪಾದಿಸುತ್ತಾರೆ. ಗ್ರಾಮದಲ್ಲಿ ಅತಿಹೆಚ್ವು ಹಾಲು ಉತ್ಪಾದಕ ಎಂಬ ಕೀರ್ತಿ ಇವರದ್ದಾಗಿದೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಾನ ಅಳವಡಿಸಿಕೊಂಡಿದ್ದು, ಕಡಿಮೆ ಶ್ರಮ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಹೈನುಗಾರಿಕೆಗೆ ಅತಿ ಅವಶ್ಯಕವಾಗಿರುವುದು ರಾಸುಗಳ ಆಹಾರ (ಮೇವು). ಸಾಮಾನ್ಯವಾಗಿ ಸೀಮೆ ಹಸುಗಳಿಗೆ ಹಸಿ ಹಾಗೂ ಒಣಹುಲ್ಲಿನ ಜತೆಗೆ ಹಲವಾರು ಪಶು ಆಹಾರ (ಫೀಡ್​) ನೀಡಬೇಕು. ಹಸುಗಳಿಂದ ಕೊಬ್ಬಿನಾಂಶ (್ಯಾಟ್​) ಹೆಚ್ಚಿರುವ ಹಾಲು ಉತ್ಪಾದನೆಗೆ ಉತ್ತಮ ಮೇವು ನೀಡುವುದು ಅವಶ್ಯಕವಾಗಿದೆ. ಸಂಪಾದನೆಯ ಸಾಕಷ್ಟು ಭಾಗ ಮೇವಿಗಾಗಿಯೇ ವ್ಯಯವಾಗುತ್ತದೆ. ಆದರೆ, ಚಿಕ್ಕರಾಜು ಅವರು ನಿರ್ಮಿಸಿಕೊಂಡಿರುವ ಹೊಸ ತಂತ್ರಾನವಾದ ಹೈಡ್ರೊಪೋನಿಕ್​ ಮೇವು ಟಕದಿಂದ ಹಾಲಿನ ಇಳುವರಿ ಜತೆಗೆ, ಕಡಿಮೆ ಖರ್ಚಿನಲ್ಲಿ ಹೆಚ್ವು ಲಾಭ ಗಳಿಸುತ್ತಿದ್ದಾರೆ. ಹೈಡ್ರೊಪೋನಿಕ್​ ಮೇವು ಟಕ ಆರಂಭಿಸಿದ ತಾಲೂಕಿನ ಮೊದಲ ರೈತ ಎಂಬ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

ರೇಷ್ಮೆ ಕೃಷಿಯಲ್ಲೂ ವಿಭಿನ್ನ!!

ರೇಷ್ಮೆ ಕೃಷಿಯಲ್ಲೂ ನೂತನ ವಿಧಾನಗಳನ್ನು ಅಳವಡಿಸಿಕೊಳ್ಳುವ ಚಿಕ್ಕರಾಜು, ಭರ್ಜರಿ ಲಾಭ ತೆಗೆಯುತ್ತಿದ್ದಾರೆ. ಇವರ ಅರ್ಧ ಜೀವನ ಹೈನುಗಾರಿಕೆಯಾದರೆ, ಉಳಿದ ಅರ್ಧ ಜೀವನ ರೇಷ್ಮೆ ಸಾಕಣೆ. ವರ್ಷಕ್ಕೆ 13 ಬ್ಯಾಚ್​ ರೇಷ್ಮೆ ಸಾಕಣೆ ಮಾಡುತ್ತಿದ್ದು, ಪ್ರತಿ ತಿಂಗಳು ರೇಷ್ಮೆ ಬೆಳೆಯುತ್ತಾರೆ. ಇನ್ನು ರೇಷ್ಮೆ ಹುಳುವಿನ ಆಹಾರವಾದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವ ವಿಧಾನದಲ್ಲೂ ಹೊಸತನ ರೂಢಿಸಿಕೊಂಡಿದ್ದಾರೆ. ಸ್ವಂತ ಹಾಗೂ ಗುತ್ತಿಗೆ ಪಡೆದಿರುವ ಜಮೀನುಗಳಲ್ಲಿ ಹತ್ತು ಅಡಿಗೆ ಒಂದು ಗುಳಿಯಂತೆ ಎಒನ್​ ತಳಿಯ ರೇಷ್ಮೆಸೊಪ್ಪು ಬೆಳೆಯುತ್ತಿದ್ದಾರೆ.

ಈ ಗಿಡಗಳ ನಿರ್ವಹಣೆ ಸುಲಭವಾಗಿದ್ದು, ಹತ್ತು ಗಿಡದಲ್ಲಿ ಸಿಗುವ ಸೊಪ್ಪು ಒಂದೇ ಗಿಡದಲ್ಲಿ ಸಿಗುತ್ತದೆ. ಉಳುಮೆ ಹಾಗೂ ಹೆಚ್ಚು ನೀರಿನ ಅವಶ್ಯಕತೆಯೂ ಬೇಕಿಲ್ಲ. ಇದಲ್ಲದೆ ಗಿಡಗಳ ಪಕ್ಕದಲ್ಲಿ ಕಾಲುವೆಯಂಥ ಕಿರುಗುಂಡಿಗಳನ್ನು ನಿರ್ಮಿಸಿದ್ದು, ಜಮೀನಿನ ತ್ಯಾಜ್ಯ ಸೇರಿ ರೇಷ್ಮೆ ತ್ಯಾಜ್ಯವನ್ನು ಈ ಗುಂಡಿಗೆ ಹಾಕಿ ಕೊಳೆಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ, ಜಮೀನಿನ ಫಲವತ್ತತೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.

ಹಣ್ಣಾದ ರೇಷ್ಮೆಗೂಡುಗಳನ್ನು ಬಿದಿರಿನ ಚಂದ್ರಿಕೆಯಲ್ಲಿ ಹಾಕಿ ಗೂಡು ಕಟ್ಟಿಸುವುದು ಸಾಮಾನ್ಯ ಕ್ರಮ. ಆದರೆ, ರೇಷ್ಮೆಹುಳು ಸಾಕುವ ತಟ್ಟೆಯಲ್ಲಿಯೇ ಪ್ಲಾಸ್ಟಿಕ್​ ಜಾಲರಿ ಇಟ್ಟು ಅಲ್ಲಿಯೇ ಗೂಡು ಕಟ್ಟಿಸುವ ಹೊಸ ವಿಧಾನ ಅಳವಡಿಸಿಕೊಂಡಿದ್ದು, ಇದರಿಂದ ಚಂದ್ರಿಕೆ ಬಾಡಿಗೆ ಹಾಗೂ ಅದನ್ನು ಕಾಯ್ದು ಕೂರುವ ಅನಿವಾರ್ಯತೆ ತಪ್ಪಿದೆ ಎನ್ನುತ್ತಾರೆ ಚಿಕ್ಕರಾಜು.

ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಯಲ್ಲಿ ಶ್ರಮವನ್ನು ಕಡಿಮೆ ಮಾಡಿಕೊಂಡಿರುವ ಚಿಕ್ಕರಾಜು, ಇವೆರಡರ ಜತೆಗೆ ತೆಂಗು, ಭತ್ತ ಸೇರಿ ವಿವಿಧ ಬೆಳೆಗಳನ್ನು ಸಹ ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇವರ ಕೃಷಿಗೆ ಪತ್ನಿ ಪುಷ್ಪಲತಾ ಸಾಥ್​ ನೀಡುತ್ತಿದ್ದಾರೆ.

ದುಡಿದ ಹಣ ಸಮಾಜಕ್ಕೆ!!!

ಸಾಮಾನ್ಯವಾಗಿ ಕೃಷಿಯಲ್ಲಿ ಕಷ್ಟಪಟ್ಟು ದುಡಿದು ಸಂಪಾದನೆ ಮಾಡುತ್ತಿರುವ ಲಾಂತರ ಮಂದಿ ಕಣ್ಣ ಮುಂದಿದ್ದಾರೆ. ಆದರೆ, ಕೃಷಿಯಲ್ಲಿ ದುಡಿದ ಹಣವನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಚಿಕ್ಕರಾಜು ಓರ್ವ ಸಮಾಜಮುಖಿ ರೈತ ಎನಿಸಿಕೊಂಡಿದ್ದಾರೆ. ದಿವಂಗತ ಅಂಬರೀಷ್​ ಅವರ ಅಪ್ಪಟ ಅಭಿಮಾನಿಯಾಗಿರುವ ಚಿಕ್ಕರಾಜು, ನೆಚ್ಚಿನ ನಟನ ನಿಧನದ ಬಳಿಕ ಗ್ರಾಮದಲ್ಲಿ ಅವರ ಹೆಸರಿನಲ್ಲಿ ಬಸ್​ ತಂಗುದಾಣ ನಿರ್ಮಿಸಿದ್ದಾರೆ.

ಇನ್ನು ಇವರ ಪತ್ನಿ ಪುಷ್ಪಲತಾಗೆ ದಿವಂಗತ ಪುನೀತ್​ ರಾಜ್​ಕುಮಾರ್​ ಅಚ್ಚುಮೆಚ್ಚಾಗಿದ್ದು, ಪತ್ನಿಯ ಆಸೆಯಂತೆ ಗ್ರಾಮದ ಮುಂಭಾಗದಲ್ಲಿ ಅಪ್ಪು ಪಾರ್ಕ್​ ನಿರ್ಮಿಸಿದ್ದಾರೆ. ಇದರೊಂದಿಗೆ, ಗ್ರಾಮದಲ್ಲಿ ತಂದೆ&ತಾಯಿ ಹೆಸರಿನಲ್ಲಿ ಅರಳಿಕಟ್ಟೆ ಹಾಗೂ ಚೆಲ್ಲಮ್ಮ ದೇವಸ್ಥಾನ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಅವುಗಳ ನಿರ್ವಹಣೆಯನ್ನು ಸಹ ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಇನ್ನು ಪುನೀತ್​ ಪುಣ್ಯಸ್ಮರಣೆ ಹಾಗೂ ಅಂಬರೀಷ್​ ಹುಟ್ಟುಹಬ್ಬದ ದಿನದಂದು ಸ್ವಂತ ಖರ್ಚಿನಲ್ಲಿ ಅನ್ನದಾನ ಮಾಡುತ್ತಾರೆ. ಮಕ್ಕಳಿಲ್ಲದ ಪುಷ್ಪಲತಾ ಹಾಗೂ ಚಿಕ್ಕರಾಜು ದಂಪತಿ, ಕೃಷಿ, ಸಾಕುಪ್ರಾಣಿ ಹಾಗೂ ಸಾಮಾಜಿಕ ಸೇವೆಗಳ ಮೂಲಕ ನೋವು ಮರೆಯುತ್ತಿದ್ದಾರೆ.

ಬಂಪರ್​ ಬಹುಮಾನ ನೀಡುವ ದಾನಿ!

ರಾಜಕೀಯದಿಂದ ದೂರವಿರುವ ಚಿಕ್ಕರಾಜು ಅವರನ್ನು ಗ್ರಾಮದ ಜನರು ಒತ್ತಾಯ ಮಾಡಿ ಇತ್ತೀಚೆಗೆ ನಡೆದ ಡೇರಿ ಚುನಾವಣೆಯಲ್ಲಿ ಅಧಿಕ ಮತ ನೀಡಿ ಗೆಲ್ಲಿಸಿದ್ದಾರೆ. ಡೇರಿ ನಿರ್ದೇಶಕನಾದ ಮೇಲೆ ಅಲ್ಲಿಗೂ ಏನಾದರೂ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದ ಚಿಕ್ಕರಾಜು, ಡೇರಿಗೆ ಅತಿಹೆಚ್ಚು ಹಾಲು ಪೂರೈಕೆ ಮಾಡುವ ರೈತರಿಗೆ ಬಹುಮಾನ ೂಷಿಸಿ, ಅದರಂತೆ ಕೆಲದಿನಗಳ ಹಿಂದೆ ವಿಜೇತರಿಗೆ ಫ್ರಿಜ್​, ಟಿವಿ, ್ಯಾನ್​ ಸೇರಿ ಹತ್ತು ಹಲವು ಬಹುಮಾನಗಳನ್ನು ವಿತರಿಸಿದ್ದಾರೆ. ಡೇರಿಗೆ ಅತಿಹೆಚ್ಚು ಹಾಲು ಪೂರೈಸುವ ರೈತ ಇವರೇ ಆದರೂ ಉಳಿದ ರೈತರು ಹೆಚ್ಚು ಹಾಲು ಉತ್ಪಾದನೆ ಮಾಡಲಿ ಎಂಬ ಆಶಯ ಇವರದಾಗಿದೆ. ಈ ಎಲ್ಲ ಕಾರಣಗಳಿಂದ ಚಿಕ್ಕರಾಜು ಮಾದರಿ ಹಾಗೂ ಸಮಾಜಮುಖಿ ಎನಿಸಿಕೊಂಡಿದ್ದಾರೆ.

ಧರ್ಮದ ಹಾದಿಯಲ್ಲಿ ಸಂಪಾದಿಸುವ ವೃತ್ತಿ ಎಂದರೆ ಅದು ಕೃಷಿ ಮಾತ್ರ. ದುಡ್ಡೇ ದೊಡ್ಡದಲ್ಲ. ಈ ಕಾರಣದಿಂದ ಸಂಪಾದಿಸಿದ ಹಣದಲ್ಲಿ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬುದು ನನ್ನ ಹಾಗೂ ಪತ್ನಿಯ ಆಶಯವಾಗಿದೆ. ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಯಲ್ಲಿ ಉತ್ತಮ ಲಾಭವಿದೆ. ರೈತರು ಕೆಲವು ವಿಚಾರಗಳನ್ನು ತಿಳಿದು ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಗ್ರಾಮದಲ್ಲಿ ತಂಗುದಾಣ, ಪಾರ್ಕ್​ ಹಾಗೂ ಅರಳಿಕಟ್ಟೆ ನಿರ್ಮಿಸಿದ್ದೇನೆ. ಇನ್ನಷ್ಟು ಕೆಲಸ ಮಾಡುವ ಹಂಬಲವಿದೆ. ಚಿಕ್ಕರಾಜು, ಮಾದರಿ, ಸಮಾಜಮುಖಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net