

ಹಾನಗಲ್ಲ: ಬೆಳೆ ಹಾನಿಯಿಂದಾಗಿ ನಿರೀಕ್ಷಿತ ಫಸಲು ಬಾರದೇ ಇರುವುದರಿಂದ ಮನನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶಂಕ್ರಪ್ಪ ಫಕೀರಪ್ಪ ಬಾಳಂಬೀಡ (42) ಮೃತ ರೈತ. ಸೆ. 19ರಂದು ಮನೆಯಲ್ಲಿ ವಿಷ ಸೇವಿಸಿದ್ದ ಈತನನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಸೆ. 21ರಂದು ಮನೆಗೆ ಮರಳಿದ್ದ. ಸೆ. 30ರಂದು ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಸೆ. 15ರಂದು ರಾತ್ರಿ ಶಂಕ್ರಪ್ಪ ಮೃತ ಪಟ್ಟಿದ್ದಾನೆ.
ಶಂಕ್ರಪ್ಪ ತಮ್ಮ ಸ್ವಂತದ 1 ಎಕರೆ ಹೊಲದೊಂದಿಗೆ ಬೇರೊಬ್ಬರ 4 ಎಕರೆ ಜಮೀನನ್ನು ಗೇಣಿ ಹಾಕಿಕೊಂಡು ಉಳುಮೆ ಮಾಡುತ್ತಿದ್ದ. ಹೊಲದಲ್ಲಿ ಗೋವಿನಜೋಳ ಬೆಳೆದಿದ್ದ ಶಂಕ್ರಪ್ಪನಿಗೆ ಇತ್ತೀಚೆಗೆ ಸತತವಾಗಿ ಬಿದ್ದ ಮಳೆಯಿಂದ ನಿರಾಶೆಯಾಗಿತ್ತು. ಕೃಷಿಗಾಗಿ ಶಂಕ್ರಪ್ಪ ಸ್ಥಳೀಯವಾಗಿ ಲಕ್ಷಾಂತರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಕೈಗಡ ಸಾಲವನ್ನು ತೀರಿಸಲು ಸಾಧ್ಯವಾಗದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕ್ರಪ್ಪನ ಸಹೋದರ ಶಿವರಾಜ್ ಹಾನಗಲ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.