

ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯ ಜೀವಿ ವಲಯ ವ್ಯಾಪ್ತಿಯ ಲಾಂಡೆ ಗ್ರಾಮದಲ್ಲಿ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ರೈತ ಅರ್ಜುನ ಪುನೊ ವೇಳಿಪ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ರೈತರಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳುರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಂಡೆ ಗ್ರಾಮದ ರೈತ ಅರ್ಜುನ್ ಪುನೊ ವೇಳಿಪ ಬೆಳಗ್ಗೆ 10 ಗಂಟೆ ಸುಮಾರಿಗೆ ಜಮೀನಿಗೆ ತೆರಳುತ್ತಿದ್ದಾಗ ಕರಡಿ ದಾಳಿ ಮಾಡಿ ಕಣ್ಣು, ಮುಖ, ಎದೆಗೆ ಪರಚಿ ಹೊಟ್ಟೆ ಹಾಗೂ ಮರ್ಮಾಂಗ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ, ಇವರ ಸ್ಥಿತಿ ಚಿಂತಾಜನಕವಾಗಿದೆ.
ಅಣಶಿ ವಲಯ ಅರಣ್ಯಾಧಿಕಾರಿ ಗಣರಾಜ ಪಟಗಾರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.