ರೈತರ ಬದುಕು ಹಸನಾಗಲು ಪ್ರಕೃತಿ ಕೊಡುಗೆ ಅಪಾರ

273
Published on

ಜಗಳೂರು: ದೇಶದ ಅನ್ನದಾತರು ಎನಿಸಿಕೊಂಡ ರೈತರ ಬಾಳು ಹಸನಾಗಲು ಪ್ರಕೃತಿಯ ಕೊಡುಗೆ ಅನನ್ಯ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ತಾಲೂಕಿನ ಗಡಿಮಾಕುಂಟೆ ಗ್ರಾಮದ ಕೆರೆಗೆ ನೀರು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಂಗಳವಾರ ಹಮ್ಮಿಕೊಂಡಿದ್ದ ಗಂಗಾಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿ ಮೊದಲು ಸೃಷ್ಟಿಯಾದ ಧಾತು ನೀರು. ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಅನ್ನ, ಅನ್ನದಿಂದ ಜೀವವಾಗಿದೆ. ಪ್ರಸ್ತುತದಲ್ಲಿ ಜಗತ್ತಿನ ಅನೇಕ ದೇಶಗಳು ನೀರಿಲ್ಲದೇ ಯಾತನೆ ಅನುಭವಿಸುತ್ತಿವೆ. ಭಾರತದಲ್ಲಿ ಹೆಚ್ಚು ಜಲಮೂಲ ಹಾಗೂ ಪ್ರಾಕೃತಿಕ ಸಂಪತ್ತು ಹೊಂದಿದ್ದೇವೆ. ನೀರು ಶೇಖರಣೆ ಮಾಡಿ ಎಲ್ಲ ಋತುಮಾನಗಳಲ್ಲಿ ನೀರನ್ನು ಒದಗಿಸುವುದೇ ಕೆರೆಗಳು ಹಾಗೂ ಅವುಗಳ ಉಳಿವಿಗಾಗಿ ನಿಂತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಲಮೂಲ ಎಲ್ಲಿ ಉತ್ತಮವಾಗಿರುತ್ತದೆಯೋ ಆ ದೇಶ ಎಂದೂ ಕ್ಷಾಮಕ್ಕೆ ಒಳಗಾಗುವುದಿಲ್ಲ. ಯಾವುದೇ ವ್ಯಕ್ತಿಯ ಇಚ್ಛಾಶಕ್ತಿ ಜನರ ಕಲ್ಯಾಣಕ್ಕಾಗಿ ಇರಬೇಕು. ಆ ನಿಟ್ಟಿನಲ್ಲಿ ಜಗಳೂರಿನ ಹಾಲಿ ಮತ್ತು ಮಾಜಿ ಶಾಸಕರ ಪಕ್ಷಾತೀತವಾದ ಶ್ರಮ ತಾಲೂಕಿನ 57 ಕೆರೆಗಳು ತುಂಬಿಸುವ ಯೋಜನೆಯ ಸಕಾರಣಗೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, 57 ಕೆರೆಗಳ ನೀರಾವರಿ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಶ್ರಮ ಅಪಾರ. ಇಮಾಂ ಸಾಹೇಬರ ಕನಸಿನ ಕೂಸಾದ ಗಡಿಮಾಕುಂಟೆ ಕೆರೆ ನಾವೆಲ್ಲರೂ ಸಂರಕ್ಷಣೆ ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಶಾಸಕನಾಗಿದ್ದ ವೇಳೆ ಮಾಜಿ ಸಚಿವ ಆಂಜನೇಯ ಜತೆಗೂಡಿ ಸಿರಿಗೆರೆ ಶ್ರೀಗಳ ಮಾರ್ಗದರ್ಶನದಂತೆ ಡಿಪಿಆರ್ ಮಾಡಿಸಲಾಗಿತ್ತು. ನೀರಾವರಿ ಹೋರಾಟ ಸಮಿತಿಗಳು ಅಂದಿನ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ ಇಚ್ಛಾಶಕ್ತಿಯಿಂದ ಇಂದು ಜಗಳೂರು ಕೆರೆಗಳಿಗೆ ತುಂಗಭದ್ರಾ ನೀರು ಹರಿದುಬಂದಿದೆ. ಗಡಿಮಾಕುಂಟೆ ಕೆರೆಯೂ ಜಗಳೂರು ತಾಲೂಕಿನ ರೈತರ ಜೀವನಾಡಿಯಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಜಗಳೂರು ಜನರ ಬಗ್ಗೆ ವಿಶೇಷ ಕಾಳಜಿ ಇರುವ ಶಾಸಕ ದೇವೇಂದ್ರಪ್ಪ ವಿಧಾನ ಸೌಧದ ಅಧಿವೇಶನದಲ್ಲಿ ಗುಡುಗಿದ್ದರಿಂದಲೇ ಇಂದು 57ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲಪ್ರದವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಯು.ಜಿ. ಶಿವಕುಮಾರ್, ತಾಪಂ ಮಾಜಿ ಸದಸ್ಯ ಸಿದ್ದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಹೊಸಕೆರೆ ಗ್ರಾಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಬಿಸ್ತುವಳ್ಳಿ ಬಾಬು, ಪ್ರಕಾಶ್‌ರೆಡ್ಡಿ, ಹಟ್ಟಿ ತಿಪ್ಪೇಸ್ವಾಮಿ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಎಸ್.ಕೆ ರಾಮರೆಡ್ಡಿ, ಗ್ರಾಪಂ ಸದಸ್ಯ ಕುಮಾರ್, ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net