

ರಾಮನಗರ: ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿಯಲ್ಲಿ ಆನೆ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ಪುಟ್ಟನಂಜಯ್ಯ (65) ಮೃತಪಟ್ಟ ರೈತ. ಗ್ರಾಮದ ಪಕ್ಕದಲ್ಲಿಯೇ ತಮ್ಮ ಜಮೀನಿನಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದರು. ರಾತ್ರಿ ವೇಳೆ ಕಾವಲು ಇದ್ದ ವೇಳೆ ಆನೆಯೊಂದು ದಾಳಿ ನಡೆಸಿದೆ. ಈ ವೇಳೆ ಆನೆ ಪುಟ್ಟನಂಜಯ್ಯ ಅವರ ತಲೆ ಭಾಗಕ್ಕೆ ತುಳಿದಿದ್ದು, ಇದರಿಂದ ಪುಟ್ಟನಂಜಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸಾತನೂರು ವಲಯ ಅರಣ್ಯ ಅಧಿಕಾರಿ ಆಶಾ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಆನೆ ದಾಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗೊತ್ತೇ ಆಗಲಿಲ್ಲ: ಪುಟ್ಟ ನಂಜಯ್ಯ ಅವರೊಟ್ಟಿಗೆ ಇತರೆ ಮೂರು ಮಂದಿ ಮಲಗಿದ್ದರು. ಪುಟ್ಟನಂಜಯ್ಯ ಒಂದು ಕಡೆ ಮಲಗಿದ್ದು, ದಾರಿಯಲ್ಲಿ ಸಾಗುವ ವೇಳೆ ಪುಟ್ಟನಂಜಯ್ಯ ಅವರನ್ನು ಆನೆ ತುಳಿದು ಸಾಯಿಸಿ ಮುಂದೆ ಸಾಗಿದೆ. ಆದರೆ ನಿದ್ರೆಯಲ್ಲಿದ್ದ ಇತರೆ ಮೂವರಿಗೆ ಆನೆ ದಾಳಿ ನಡೆಸಿರುವುದು ತಿಳಿದೇ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೃತ ದೇಹವನ್ನು ಕನಕಪುರ ಆಸ್ಪತ್ರೆಗೆ ರವಾನಿಸಲಾಗಿದೆ.