

* ತಿಮ್ಮಪ್ಪನಪಾಳ್ಯದ ನಾಗೇಶ್ ಯಶೋಗಾಥೆ
* ವಿವಿಧ ಬೆಳೆಗಳಿಂದ ಲಾಭ ಕಂಡ ರೈತ
ಚೇತನ್ ಚಕ್ಕೆರೆ ಬಿಡದಿ
ವ್ಯವಸಾಯವೆಂದರೆ ಇಂದಿನ ದಿನಗಳಲ್ಲಿ ದೂರ ಉಳಿಯುವವರೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲೊಬ್ಬ ರೈತ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಬೇಸಾಯ ಮಾಡಿ ಲಾಭ ಗಳಿಸುವ ಮೂಲಕ ಕೃಷಿಯಲ್ಲಿ ಖುಷಿಕಂಡುಕೊಂಡಿದ್ದಾರೆ.
ಹೌದು.. ಬಿಡದಿಯ ತಿಮ್ಮಪ್ಪನಪಾಳ್ಯ ಗ್ರಾಮದ ರೈತ ನಾಗೇಶ್ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ತಂದೆ ರಂಗಸ್ವಾಮಿ ಹಾಗೂ ಸಹೋದರ ರೇಣುಕಯ್ಯ ಅವರ ಜತೆ ಸೇರಿ ವಿವಿಧ ಬೆಳೆ ಬೆಳೆದು ಕೃಷಿಯಲ್ಲಿ ಲಾಭ ಪಡೆಯುತ್ತಿದ್ದಾರೆ.
ನಾಗೇಶ್ ಅವರು 10 ಎಕರೆ ಭೂಮಿಯಲ್ಲಿ ಬಾದಾಮಿ, ರಸಪೂರಿ, ತೋತಾಪುರಿ, ಸೇಂದೂರ ತಳಿಯ ಗಿಡಗಳನ್ನು ನೆಟ್ಟಿದ್ದು, ಪ್ರತಿ ವರ್ಷ ಉತ್ತಮ ಸಲು ಪಡೆಯುತ್ತಿದ್ದಾರೆ. ಮರಗಳನ್ನು ಗುತ್ತಿಗೆಗೆ ನೀಡದೆ ಕೃಷಿ ಇಲಾಖೆಯಿಂದ ಔಷಧ ಸಿಂಪಡಿಸುವ ಯಂತ್ರ ಖರೀದಿಸಿ ಸ್ವಂತ ನಿರ್ವಹಣೆ ಮಾಡುತ್ತಿದ್ದಾರೆ. ಇಳುವರಿ ಸಮಯದಲ್ಲಿ ನೇರವಾಗಿ ಬೆಂಗಳೂರಿನ ಹಾಪ್‌ಕಾಮ್ಸ್ಗೆ ಮಾರಾಟ ಮಾಡಿ ಲಾಭ ಕಾಣುತ್ತಿದ್ದಾರೆ. ಕೃಷಿ ಇಲಾಖೆ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಸರ್ಕಾರದ ಪ್ರತಿಯೊಂದು ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಾರೆ. ಅಲ್ಲದೆ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದಾರೆ.
ಕೃಷಿಯ ಜತೆಗೆ ಹೈನುಗಾರಿಕೆ ಮಾಡಿಕೊಂಡಿರುವ ನಾಗೇಶ್ 3-4 ಸೀಮೆ ಹಸುಗಳನ್ನು ಸಾಕಿದ್ದಾರೆ. ಮೇವಿಗಾಗಿ ಬೇಬಿ ಕಾರ್ನ್, ಸೀಮೆ ಹುಲ್ಲು ಬೆಳೆದಿದ್ದಾರೆ. ಮೇವು ಕತ್ತರಿಸಲು ಚಾಪರ್ ಕಟರ್, ಹಾಲು ಕರೆಯಲು ಯಂತ್ರವನ್ನು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮೇವು ಸಂಗ್ರಹಿಸಲು ಸೈಲೇಜ್ ಕಟ್ಟಿಸಿ ಹೈನುಗಾರಿಕೆಗೆ ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ.
ರಂಗಸ್ವಾಮಿ ಹಾಗೂ ಪುತ್ರ ನಾಗೇಶ್ ಅವರ ಸಮಗ್ರ ಕೃಷಿ ಪದ್ಧತಿ ಗುರುತಿಸಿ ಕನ್ನಡಪರ ಸಂಘಟನೆಗಳು ಸೇರಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಕೃಷಿ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.