ಬ್ಯಾಂಕ್​ನವರ ಧೋರಣೆಯಿಂದ ಪ್ರಾಣ ಕಳೆದುಕೊಂಡ ರೈತ; ಪೊಲೀಸರು-ಸಂಬಂಧಿಕರ ಮಧ್ಯೆ ಸಂಘರ್ಷ..

Farmer
Published on

ಹಾವೇರಿ: ಬ್ಯಾಂಕ್​ನವರ ಧೋರಣೆಯಿಂದ ರೈತನೊಬ್ಬ ಪ್ರಾಣ ಕಳೆದುಕೊಂಡಿದ್ದು, ಸಂಬಂಧಿಕರು ಬ್ಯಾಂಕ್ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದರ್ಶನ್ ಮುದ್ದಪ್ಪನವರ (30) ಪ್ರಾಣ ಕಳೆದುಕೊಂಡ ರೈತ. ಒನ್​ ಟೈಮ್​ ಸೆಟ್ಲ್​ಮೆಂಟ್​ ಮಾಡದ ಬ್ಯಾಂಕ್ ಧೋರಣೆಯಿಂದ ಸಾಲ ಹೆಚ್ಚಾದ ಪರಿಣಾಮವಾಗಿ ಈ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ತಂದೆಯ ಹೆಸರಲ್ಲಿ 4 ಲಕ್ಷ ರೂ. ಸಾಲ ಹಾಗೂ ಕೈಗಡವಾಗಿ 2 ಲಕ್ಷ ರೂ. ಸಾಲ ಹೊಂದಿದ್ದ. ಆದರೆ ಬ್ಯಾಂಕ್​ನವರು ಒನ್​ ಟೈಮ್ ಸೆಟ್ಲ್​ಮೆಂಟ್ ಮಾಡದ್ದಕ್ಕೆ ಬಡ್ಡಿ ಹೆಚ್ಚಾಗಿದೆ. ರೈತರಿಗೆ ಹೇಳದ ಒಟಿಎಸ್​ ಮೀಟಿಂಗ್ ಮಾಡಿದ್ದು, ಮತ್ತಷ್ಟು ಸಾಲ ಹೆಚ್ಚಾಗಲು ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಯೂನಿಯನ್​ ಬ್ಯಾಂಕ್ ಶಾಖೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

ಆದರೆ ಶವದೊಂದಿಗೆ ಬ್ಯಾಂಕ್​ನತ್ತ ತೆರಳಲು ಸಂಬಂಧಿಕರು ಮತ್ತು ರೈತ ಮುಖಂಡರಿಗೆ ಪೊಲೀಸರು ಬಿಡದ್ದರಿಂದ ಪೊಲೀಸರು ಮತ್ತು ಅವರ ಮಧ್ಯ ನೂಕಾಟ ಉಂಟಾಗಿತ್ತು. ಇದರಿಂದ ಅಲ್ಲಿ ಒಂದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸರು ಅವರನ್ನೆಲ್ಲ ವ್ಯಾನ್​ಗೆ ತುಂಬಿಸಿಕೊಂಡು ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಎಸ್​ಪಿ, ಎಎಸ್​​ಪಿ, ಇಬ್ಬರು ಡಿವೈಎಸ್​ಪಿ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತೆ ದೃಷ್ಟಿಯಿಂದ ಹಲಗೇರಿ ಠಾಣೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net