

ಮಳವಳ್ಳಿ: ತಾಲೂಕಿನ ದೇವಿಪುರ ಗ್ರಾಮದಲ್ಲಿ ಸಾಲಗಾರರ ಕಿರುಕುಳ ತಾಳಲಾರದೆ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದ ರೈತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಗ್ರಾಮದ ಚಿಕ್ಕಣ್ಣ(65) ಮೃತರು. ಕೃಷಿ ಚಟುವಟಿಕೆ ಮಾಡಲೆಂದು ತಳಗವಾದಿ ಬ್ಯಾಂಕ್‌ನಲ್ಲಿ ಒಡವೆ ಸಾಲ ಹಾಗೂ ಖಾಸಗಿಯವರಿಂದ ಕೈ ಸಾಲ ಸೇರಿ ಸುಮಾರು 8ಲಕ್ಷ ರೂ.ವರೆಗೆ ಸಾಲ ಮಾಡಿಕೊಂಡಿದ್ದು, ಬೆಳೆದ ಬೆಳೆಗಳು ಇಳುವರಿ ಕಡಿಮೆಯಾಗುವುದರ ಜತೆಗೆ ಸರಿಯಾದ ಬೆಲೆ ಸಿಗದ ಕಾರಣ ಸಾಲ ತೀರುವಳಿ ಮಾಡಲಾಗಿರಲಿಲ್ಲ.
ಇತ್ತೀಚೆಗೆ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮಾನಕ್ಕೆ ಹೆದರಿದ್ದು, ಮಂಗಳವಾರ ರಾತ್ರಿ ಮನೆಯ ಹಿಂಬದಿಯಲ್ಲಿದ್ದ ಜಾನುವಾರುಗಳನ್ನು ಕಟ್ಟುವ ಕೊಟ್ಟಿಗೆಯಲ್ಲಿ ಧಾನ್ಯಗಳು ಕೆಡದಂತೆ ಮಿಶ್ರಣ ಮಾಡುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ತೀವ್ರ ಅಸ್ವಸ್ಥತೆಗೊಂಡಿದ್ದರು. ಇದನ್ನು ಗಮನಿಸಿದ ಕುಟುಂಬದವರು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮದ್ದೂರು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಿದ ವೈದ್ಯರು ಕುಟುಂಬದವರಿಗೆ ಒಪ್ಪಿಸಿದ್ದಾರೆ.
ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ಶಿವಲಿಂಗ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.