ಕ್ರಿಕೆಟ್​ ಬ್ಯಾಟ್​ನಿಂದ ರೈತನ ಮೇಲೆ ಹಲ್ಲೆ

Published on

ಚಿಂತಾಮಣಿ: ತಾಲೂಕಿನ ಬಿರ್ಜೇನಹಳ್ಳಿಯಲ್ಲಿ ಇತ್ತೀಚೆಗೆ ಕ್ರಿಕೆಟ್​ ಆಡುತ್ತಿದ್ದಾಗ ಜೋಳದ ಹೊಲದಲ್ಲಿ ಬಿದ್ದಿದ್ದ ಬಾಲು ತರಲು ಹೋದ ಯುವಕನಿಗೆ ರೈತರೊಬ್ಬರು ಬೆಳೆ ಹಾಳು ಮಾಡಬೇಡಿ ಎಂದಿದ್ದಕ್ಕೆ ಕೋಪಗೊಂಡು ಕ್ರಿಕೆಟ್​ ಬ್ಯಾಟ್​ನಿಂದ ಹಲ್ಲೆ ಮಾಡಿದ್ದಾನೆ. ರೈತನ ದೂರಿನ ಆದಾರದ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೇಕಲ್ಲಹಳ್ಳಿಯ ಆಂಜನಪ್ಪ (64) ಹಲ್ಲೆಗೆ ಒಳಗಾದ ರೈತ. ಬಿರ್ಜೇನಹಳ್ಳಿಯ ಮಂಜುನಾಥ ಬಾಲಾಜಿ (20) ಆರೋಪಿ. ಜೂ. 25ರಂದು ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಂಜುನಾಥ ಮತ್ತು ಗೆಳೆಯರು ಕ್ರಿಕೆಟ್​ ಆಡುತ್ತಿದ್ದಾಗ ಜೋಳದ ಬೆಳೆಗೆ ಬಂದು ಬಿದ್ದಿದ್ದ ಚೆಂಡು ತೆಗೆದುಕೊಳ್ಳಲು ಬಂದಿದ್ದಾರೆ. ಆಗ ರೈತ ಬಾಲ್​ ತೆಗೆದುಕೊಂಡು ಮನೆಯಲ್ಲಿ ಹೇಳುವುದಾಗಿ ಗದರಿಸಿದ್ದಾರೆ. ಸಂಜೆ ಯುವಕ ಮಂಜುನಾಥ ಬ್ಯಾಟಿನೊಂದಿಗೆ ಮನೆಯ ಬಳಿಗೆ ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಆಂಜನಪ್ಪ ಅವರನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್​.ಎನ್​.ಆರ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜು.4ರಂದು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net