ರೈತರಿಗೆ ಆತಂಕ ತಂದಿಟ್ಟ ಡ್ರೋನ್ ಹಾರಾಟ!

farmer, anxiety, drone, flight,
Published on

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನ ಭೌಗೋಳಿಕ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೃಷಿಭೂಮಿ ವಿಸ್ತೀರ್ಣವನ್ನು ಗಣಕೀಕೃತ ದಾಖಲೀಕರಣ ಮಾಡಿಕೊಳ್ಳುವ ಸಂಬಂಧ ಜಮೀನುಗಳ ಮೇಲೆ ಡ್ರೋನ್ ಹಾರಾಟ ನಡೆಸುತ್ತಿರುವುದು, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ದೊಡ್ಡ ಉಳ್ಳಾರ್ತಿ ಕಾವಲು ಭೂಮಿ ಪ್ರದೇಶದ ಮೇಲೆ ಡ್ರೋನ್ ಮತ್ತು ವಿಮಾನಗಳು ಹಾರಾಟ ಮಾಡಿ, ಬಳಿಕ ಸಾವಿರಾರು ಎಕರೆ ಕಾವಲು ಭೂಮಿ ಪ್ರದೇಶವನ್ನು ವಶಪಡಿಸಿಕೊಂಡು, ಡಿಆರ್‌ಡಿಒ ಸಂಸ್ಥೆ ಸ್ಥಾಪಿಸಿದ್ದು ಸ್ಥಳೀಯ ರೈತರಲ್ಲಿ ಆತಂಕ ಮೂಡಲು ಕಾರಣ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಭೂ ದಾಖಲೆಗಳನ್ನು ಗಣಕೀಕೃತ ಮಾಡಿಕೊಳ್ಳಲು ತಂತ್ರಜ್ಞಾನ ಆಧಾರಿತ ಡ್ರೋನ್ ಬಳಕೆ ಮೂಲಕ ವಿಸ್ತೀರ್ಣ, ಅಳತೆ ಕಾರ್ಯ ಆರಂಭಿಸಲಾಗಿದೆ.

ಬೆಂಗಳೂರು ಭಾಗದಿಂದ ಅಳತೆ ಮಾಡಿಕೊಳ್ಳುವ ಕಾರ್ಯ ಆರಂಭ ಮಾಡಿಕೊಂಡು ಬಂದಿದ್ದು, ಎರಡು ತಿಂಗಳಿನಿಂದ ತಾಲೂಕಿನ ಭೂ ಪ್ರದೇಶವನ್ನು ಸರ್ವೇ ನಡೆಸಲಾಗುತ್ತಿದೆ.

ಮಾತಿನ ಚಕಮಕಿ
ಇತ್ತೀಚೆಗೆ ಪರಶುರಾಂಪುರ ಹೋಬಳಿ ಚಟ್ಟೇಕಂಬ ಜಮೀನುಗಳ ಮೇಲೆ ಡ್ರೋನ್ ಮೂಲಕ ಕೆಲವೆಡೆ ಜಮೀನುಗಳಲ್ಲಿ ಗುರುತು ಮಾಡಲು ಮುಂದಾದ ಸರ್ವೇ ಸಿಬ್ಬಂದಿಯನ್ನು ಕೃಷಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಸರ್ವೇ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದವರಾಗಿರುವ ಕಾರಣ ಭಾಷೆ ಸಮಸ್ಯೆ ಎದುರಾಗಿದೆ.

ಈ ಕಾರಣಕ್ಕೆ ರೈತರು ಭೀತಿಗೆ ಒಳಗಾಗಿದ್ದಾರೆ. ಆದರೆ, ವಾಸ್ತವವಾಗಿ ಕೃಷಿಕರಿಗೆ ಅನುಕೂಲ ಮಾಡಲು ಈ ಯೋಜನೆ ರೂಪಿಸಲಾಗಿದೆ.

ಅನೇಕ ವರ್ಷಗಳಿಂದ ಸಂಗ್ರಹಿಸಲಾಗಿದ್ದ ಭೂ ದಾಖಲೆಗಳು ಶಿಥಿಲ ಸ್ಥಿತಿ ತಲುಪಿವೆ. ಕಾರಣ, ಗಣಕೀಕೃತ ದಾಖಲೆ ಮಾಡಿಕೊಳ್ಳಲು ಡ್ರೋನ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ.

ಸಿಬ್ಬಂದಿ ಕೊರತೆ ಇರುವ ಕಾರಣ ಇಲಾಖೆ ಡ್ರೋನ್ ಬಳಕೆಯ ಮೊರೆ ಹೋಗಿದೆ. ತಾಲೂಕಿನ 5,12,310 ಎಕರೆ ಭೌಗೋಳಿಕ ಪ್ರದೇಶವನ್ನು ಡ್ರೋನ್ ಮೂಲಕ ಅಳತೆ ಮಾಡಲಾಗುತ್ತಿದೆ.

ಬಳಿಕ ಇಲಾಖೆಗೆ ನೀಡುವ ಸಾಫ್ಟ್ ಕಾಪಿ ಆಧರಿಸಿ, ಪ್ರತಿ ಗ್ರಾಮಗಳಲ್ಲಿ ಸಮಿತಿ ರಚನೆ ಮೂಲಕ ಖಾತೆದಾರರ ಜಮೀನು ವಿಸ್ತೀರ್ಣವನ್ನು ವಿಂಗಡಿಸುವ ಕಾರ್ಯವನ್ನು ಇಲಾಖೆ ಮಾಡಲಿದೆ.

ಡ್ರೋನ್ ಮೂಲಕ ಸರ್ವೇ ನಡೆಸುತ್ತಿರುವ ಕಾರ್ಯ ಕೃಷಿಕರ ಅನುಕೂಲಕ್ಕೆ. ಈ ವಿಷಯದಲ್ಲಿ ಯಾವುದೇ ಭೀತಿ ಬೇಡ. ಜಮೀನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂಬ ಸುಳ್ಳುಸುದ್ದಿಗೆ ಕಿವಿ ಕೊಡುವುದು ಬೇಡ. ಜಮೀನು ಹದ್ದುಬಸ್ತ್ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.ಬಿ.ಎಸ್.ಬಾಬುರೆಡ್ಡಿ, ಅಧಿಕಾರಿ, ಭೂಮಾಪನ ಇಲಾಖೆ, ಚಳ್ಳಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net