ರೈತರಿಗೆ ಕೃಷಿ ಸೌಲಭ್ಯದ ಮಾಹಿತಿ ನೀಡಿ

23 kurugodu 01
ಕುರುಗೋಡು ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಮಾತನಾಡಿದರು. ಇಒ ಕೆ.ವಿ, ನಿರ್ಮಲಾ, ನರೇಗಾ ಎಡಿ ಶಿವರಾಮರೆಡ್ಡಿ, ಯೋಜನಾಧಿಕಾರಿ ರಾಧಿಕಾ ಇದ್ದರು.
Published on

ಕುರುಗೋಡು: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯದ ಜತೆಗೆ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಸೂಚಿಸಿದರು.

ಪಟ್ಟಣದಲ್ಲಿ ತಾಪಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಮಳೆಗಾಲ ಆರಂಭವಾಗಿದ್ದು, ವಾಂತಿ, ಭೇದಿ, ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ ಹರಡದಂತೆ ಕ್ರಮ ವಹಿಸಬೇಕು. ಗ್ರಾಮದಲ್ಲಿನ ನೀರಿನ ಮೂಲದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಸರಬರಾಜು ಮಾಡಲು ಗ್ರಾಪಂಗೆ ಸೂಚಿಸಬೇಕು ಎಂದರು.

ಮಕ್ಕಳ ಆರೈಕೆಗಾಗಿ ಎಸ್‌ಎಫ್‌ಸಿಯು ವಾರ್ಡ್ ತೆರೆಯುವಂತೆ ಸೂಚಿಸಿದರು. ಇದಕ್ಕೆ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಮಂಜುನಾಥ ಉತ್ತರಿಸಿ, ಪ್ರಸ್ತುತ ಕುರುಗೋಡು ಪಟ್ಟಣದಲ್ಲಿ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ 70ಕ್ಕೂ ಅಧಿಕ ಒಳರೋಗಿಗಳು ದಾಖಲಾಗುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ 100 ಹಾಸಿಗೆ ಆಸ್ಪತ್ರೆ ಆರಂಭಗೊಂಡ ನಂತರ ಎನ್‌ಐಸಿಯು. ವಾರ್ಡ್ ಆರಂಭಿಸಲಾಗುವುದು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದಯಾನಂದ್ ಮಾತನಾಡಿ, ತಾಲೂಕಿನಲ್ಲಿ ಅಧಿಕ ಪ್ರಮಾಣದ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಲು ಸಜ್ಜೆ, ತೊಗರಿ, ಹತ್ತಿ, ನವಣೆ, ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ. ಮಣ್ಣಿನ ಫಲವತ್ತತೆ ಸಂರಕ್ಷಣೆಗೆ ಸೆಣಬು ಬೀಜ ಬಿತ್ತನೆ ಮಾಡುವುದು ಹಾಗೂ ಉತ್ತಮ ಇಳುವರಿಗೆ ಬೆಳೆ ಪರಿವರ್ತನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು. ಇಒ ಕೆ.ವಿ.ನಿರ್ಮಲಾ, ನರೇಗಾ ಎಡಿ ಶಿವರಾಮರೆಡ್ಡಿ, ಯೋಜನಾಧಿಕಾರಿ ರಾಧಿಕಾ, ಕಚೇರಿ ಪ್ರಭಾರ ವ್ಯವಸ್ಥಾಪಕ ಅನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net