ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ ಪ್ರಕಟ, 2024ನೇ ಸಾಲಿಗೆ ಸರ್ವೇ ನಂ.97 ಹೊತ್ತಿಗೆ ಆಯ್ಕೆ, ಅನೀಲ ಗುನ್ನಾಪುರ ಸಾಹಿತ್ಯ ಕೃಷಿಗೆ ಸಂದ ಗೌರವ

ANIL GUNNAPUR
ಅನೀಲ ಗುನ್ನಾಪುರ, ಲೇಖಕ
Published on

ವಿಜಯಪುರ: ಭೀಮಾತೀರದ ಉದಯೋನ್ಮುಖ ಸಾಹಿತಿ ಅನೀಲ ಗುನ್ನಾಪುರ ವಿರಚಿತ ‘ಸರ್ವೇ ನಂ.97’ ಕಥಾ ಸಂಕಲನಕ್ಕೆ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ ಲಭಿಸಿದೆ.

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ನೀಡಲ್ಪಡುವ 2024ನೇ ಸಾಲಿನ ಈ ಪ್ರಶಸ್ತಿಗೆ ಒಟ್ಟು 48 ಕೃತಿಗಳು ಬಂದಿದ್ದು ಅದರಲ್ಲಿ ಯುವ ಕಥೆಗಾರ ಅನಿಲ್ ಗುನ್ನಾಪುರ ಅವರ ‘ಸರ್ವೇ ನಂ.97’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಪ್ರಸಕ್ತ ಸಾಲಿಗೆ ಅದರಲ್ಲಿ ಡಾ.ಗೀತ ವಸಂತ, ಡಾ.ಅಶೋಕ ಕುಮಾರ್ ರಂಜರೆ ಮತ್ತು ಡಾ.ಕೆ. ಪುಟ್ಟಸ್ವಾಮಿ ಅವರ ತೀರ್ಪುಗಾರರಾಗಿದ್ದರು. ಈ ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಇದೇ ಜೂನ್‌ನಲ್ಲಿ ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.

ಲೇಖಕರ ಪರಿಚಯ

ಪ್ರಶಸ್ತಿಗೆ ಆಯ್ಕೆಯಾದ ’ಸರ್ವೇ ನಂ.97’ ಕಥಾ ಸಂಕಲನದ ಲೇಖಕ ಅನೀಲ ಗುನ್ನಾಪುರ ಮೂಲತಃ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರು. ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2016 ರಲ್ಲಿ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಡನೆ ಇವರ ಗುಬ್ಬಚ್ಚಿ ಗೂಡಿನಲ್ಲಿ ಕವನಸಂಕಲನ ಪ್ರಕಟಗೊಂಡಿದ್ದು, ಚೊಚ್ಚಲ ಕಥಾ ಸಂಕಲನ ‘ಕಲ್ಲುಹೂವಿನ ನೆರಳು’ ಸಹೃದಯರ ಗಮನಸೆಳೆದಿದ್ದಲ್ಲದೇ ಅನೇಕ ಪ್ರಶಸ್ತಿ- ಗೌರವಗಳಿಗೆ ಪಾತ್ರವಾಯಿತು. ಈ ಕಥಾಸಂಕಲನಕ್ಕೆ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಮತ್ತು ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ ಮತ್ತು ಸಂಗಂ ಸಾಹಿತ್ಯ ಪುರಸ್ಕಾರ ಮತ್ತು ಸಮೀರವಾಡಿ ದತ್ತಿ ನಿಧಿ ಗೌರವ ಲಭಿಸಿದೆ. ಮಾತ್ರವಲ್ಲ, ಹುಚ್ಚಯ್ಯನ ಲೀಲೆ ಕತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿಕಾಂ, ಬಿಬಿಎಂ, ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಲಿಂಗಾಯತ ಖಾನಾವಳಿ ಕತೆ ಕುವೆಂಪು ವಿಶ್ವವಿದ್ಯಾಲಯದ ಬಿಬಿಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆಯಾಗಿದೆ.

ಇದೀಗ ಸರ್ವೆ ನಂಬರ್-97 ಎಂಬ ಎರಡನೇ ಕಥಾಸಂಕಲನಕ್ಕೆ 2024 ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಲಭಿಸಿದೆ. ಇದಕ್ಕೂ ಮುನ್ನ ಬೀಳಗಿ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅರಕೇರಿ ದತ್ತಿ ಪ್ರಶಸ್ತಿಗೂ ಈ ಕಥಾ ಸಂಕಲನ ಭಾಜನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net