ಟಿಎಚ್‌ಒ ಡಾ.ಕೀರ್ತಿಕುಮಾರ್‌ಗೆ ಬೀಳ್ಕೊಡುಗೆ

HUN-AUG-30-1(HONOUR TO THO)
ಸೇವಾ ನಿವೃತ್ತಿ ಹೊಂದಿದ ಟಿಎಚ್‌ಒ ಡಾ.ಕೀರ್ತಿಕುಮಾರ್ ಅವರನ್ನು ಹುಣಸೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ವೈದ್ಯವೃಂದ ಮತ್ತು ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು. ಡಾ.ರವಿಕುಮಾರ್, ಡಾ.ಪ್ರತಾಪ್, ಡಾ.ನೇತ್ರಾವತಿ, ಪ್ರೀತಂ ಚಂಗಪ್ಪ, ಚಂದ್ರೇಗೌಡ ಇದ್ದರು.
Published on

ಹುಣಸೂರು: ಸೇವೆಯಿಂದ ನಿವೃತ್ತರಾದ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಅವರನ್ನು ವೈದ್ಯವೃಂದ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ರವಿಕುಮಾರ್, ಕಳೆದ 8 ವರ್ಷಗಳಿಂದ ತಾಲೂಕು ಆರೋಗ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಡಾ.ಕೀರ್ತಿಕುಮಾರ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಅಧೀನ ಅಧಿಕಾರಿಗಳೊಂದಿಗೆ ಅತ್ಯಂತ ಸಾಮರಸ್ಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ತಾಲೂಕಿನಾದ್ಯಂತ ಆರೋಗ್ಯ ಸಿಬ್ಬಂದಿ ಪ್ರೀತಿಗೆ ಪಾತ್ರರಾಗಿದ್ದರು ಎಂದು ಪ್ರಶಂಸಿಸಿದರು.

ಆಶಾ ಕಾರ್ಯಕರ್ತರಾದಿಯಾಗಿ ಆರೋಗ್ಯ ಇಲಾಖೆಯ ಯಾವುದೇ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದರು. ಸಾರ್ವಜನಿಕರೊಂದಿಗೆ ಮಾನವೀಯ ಗುಣಗಳೊಂದಿಗೆ ಸ್ಪಂದಿಸಿ ಸೇವೆ ನೀಡುತ್ತಿದ್ದ ಅವರು, ತಾಲೂಕಿನ ಮಗನಾಗಿ, ಇಲಾಖೆಯ ಕಟ್ಟಾಳುವಾಗಿ ದುಡಿದಿದ್ದಾರೆ. 2006ರಲ್ಲಿ ವೈದ್ಯರಾಗಿ ಹುಣಸೂರಿನ ಕರಣಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೃತ್ತಿ ಆರಂಭಿಸಿ ಇಲ್ಲೇ ನಿವೃತ್ತಿಯನ್ನೂ ಹೊಂದುತ್ತಿದ್ದಾರೆ. ಈ 25 ವರ್ಷಗಳಲ್ಲಿ ಅವರು ತಾಲೂಕಿನ ಜನರಿಗಾಗಿ ನೀಡಿರುವ ಸೇವೆಯನ್ನು ತಾಲೂಕಿನ ಜನತೆ ಮತ್ತು ಇಲಾಖೆ ಮರೆಯಲು ಸಾಧ್ಯವಿಲ್ಲವೆಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, ಕೋವಿಡ್ ಮಹಾಮಾರಿ ವಿಶ್ವವನ್ನೇ ನಡುಗಿಸುತ್ತಿದ್ದ ಸಂದರ್ಭದಲ್ಲಿ ಜನರ ಸೇವೆಗೆ ಯಾವುದೇ ರೀತಿಯ ತೊಡಕುಂಟಾಗಬಾರದೆಂದು ತಾಲೂಕು ಆರೋಗ್ಯಾಧಿಕಾರಿಯಾಗಿ ಮುಂದೆ ನಿಂತು ಆರೋಗ್ಯ ಸೇವೆ ನೀಡುತ್ತಿದ್ದರು. ಮಾತ್ರವಲ್ಲದೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಕರ್ತವ್ಯ ನಿರ್ವಹಿಸಲು ಪ್ರೇರೇಪಿಸುತ್ತಿದ್ದರು. ಎಲ್ಲರನ್ನೂ ಗೌರವಯುತವಾಗಿ ಮಾತನಾಡಿಸುತ್ತಿದ್ದ ಅವರ ನಡೆ ನುಡಿ ನಮ್ಮೆಲ್ಲರ ಸೇವಾ ಅವಧಿಗೆ ದಾರಿದೀಪವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ನೇತ್ರಾವತಿ, ಡಾ.ಸಹಾ, ಡಾ.ಸಂದೀಪ್, ಡಾ.ಆಯಿಷಾ, ಡಾ.ಪ್ರತಾಪ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಗೌಡ, ಚಂದು, ರಾಧಾ, ವಿಶಾಲಾಕ್ಷಿ, ಪ್ರೀತಂ ಚಂಗಪ್ಪ, ಉಮಾ, ಪ್ರಮಿಳಾ ಸೇರಿದಂತೆ ಆರ್‌ಬಿಎಸ್‌ಕೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net