

ಪುತ್ತೂರು ಗ್ರಾಮಾಂತರ: ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ಕಾವು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಸರ್ಕಾರ ಕೆಪಿಎಸ್ ಸ್ಕೂಲ್‌ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದು ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕಾವು ಸರ್ಕಾರಿ ಶಾಲೆಯಲ್ಲಿ ನಿವೃತ್ತ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಪ್ರಸ್ತುತ 480 ಮಕ್ಕಳಿದ್ದು, ಖಾಸಗಿ ಶಾಲೆಯಲ್ಲಿ ಏನೆಲ್ಲಾ ವ್ಯವಸ್ಥೆಗಳು ಇದೆಯೋ ಅದೆಲ್ಲವೂ ಇಲ್ಲಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೊಠಡಿಗಳ ಕೊರತೆ ಇದೆ ಎಂದರು.
ಮೈಸೂರಿನ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಮೂರ್ಜೆ ಅಭಿನಂದನಾ ಮಾತುಗಳನ್ನಾಡಿದರು. ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಾವು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಕಾವು ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ಬಿ.ಕೆ.ಅಬ್ದುಲ್ ರಹಿಮಾನ್, ಸಲ್ಮಾ, ಪ್ರವೀಣಾ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೆ.ಕೆ . ಇಬ್ರಾಹಿಂ ಹಾಜಿ, ಕಾವು ಕ್ಲಸ್ಟರ್ ಸಿಆರ್‌ಪಿ ಕೆವಿಎಲ್‌ಎನ್ ಪ್ರಸಾದ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯತೀಶಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಸಿ.ಎಚ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ ಸ್ವಾಗತಿಸಿ, ವಂದಿಸಿದರು.
ಕಾವು ಸರ್ಕಾರಿ ಶಾಲೆಯಲ್ಲಿ ಈಗ ಎಂಟನೇ ತರಗತಿ ತನಕ ತರಗತಿ ನಡೆಯುತ್ತಿದೆ. ಮುಂದೆ ಇದನ್ನು ಪ್ರೌಢಶಾಲೆಯನ್ನಾಗಿ ಪರಿವರ್ತಿಸಬೇಕು. ಕೆಪಿಎಸ್ ಸ್ಕೂಲ್ ಆಗಿ ಮಾಡಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಕಾವು ಹೇಮನಾಥ ಶೆಟ್ಟಿ ಶಾಸಕರಿಗೆ ಮನವಿ ಸಲ್ಲಿಸಿದರು. ಮೊದಲ ಆದ್ಯತೆಯಲ್ಲೇ ಬೇಡಿಕೆ ಈಡೇರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.