ಮೆಸ್ಕಾಂನಿಂದ ಹೊಸ 171 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ದ.ಕ. 17, ಉಡುಪಿ 12, ಶಿವಮೊಗ್ಗ 17, ಚಿಕ್ಕಮಗಳೂರಿನಲ್ಲಿ 11 ಸೆಂಟರ್

mescom
Published on

ಮಂಗಳೂರು: ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಇಂಧನ ಇಲಾಖೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ಹೊಸದಾಗಿ 171 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯಾಗುತ್ತಿದೆ.


ಮೆಸ್ಕಾಂ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17, ಉಡುಪಿಯಲ್ಲಿ 12, ಶಿವಮೊಗ್ಗದಲ್ಲಿ 17 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಸೇರಿದಂತೆ ಪ್ರಸ್ತುತ 57 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ 171 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ನಿರ್ದೇಶನದಂತೆ, ರಾಜ್ಯವನ್ನು ದೇಶದ ಇವಿ ಹಬ್ ಆಗಿಸಲು ಇಂಧನ ಸಚಿವಾಲಯ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಅದಕ್ಕಾಗಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯನ್ನು ನೋಡಲ್ ಏಜೆನ್ಸಿ ಆಗಿ ನೇಮಿಸಿ, ಯೋಜನೆಯ ಅನುಷ್ಠಾನದ ಹೊಣೆ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಕೇಂದ್ರಗಳ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ.
31 ಜಿಲ್ಲೆಗಳಲ್ಲಿ ಸರ್ಕಾರ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಹೊಸದಾಗಿ 1190 ಇವಿ ಚಾರ್ಜಿಗ್ ಕೇಂದ್ರಗಳು, 2380 ಇವಿ ಚಾರ್ಜರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಿಗೆ ಅವಶ್ಯ ಮೂಲ ಸೌಕರ್ಯಗಳನ್ನು ಇಂಧನ ಇಲಾಖೆ ಮಾಡಲಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 190 ಇವಿ ಚಾಜಿರ್ಂಗ್ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಪ್ರಸ್ತುತ ದ.ಕ.ದಲ್ಲಿ 79, ಉಡುಪಿಯಲ್ಲಿ 22, ಶಿವಮೊಗ್ಗದಲ್ಲಿ 50, ಚಿಕ್ಕಮಗಳೂರು ಜಿಲ್ಲೆಯಲ್ಲಿ 20 ಸೇರಿದಂತೆ ಒಟ್ಟು 171 ಕೇಂದ್ರಗಳನ್ನು ಗುರುತಿಸಲಾಗಿದೆ. 4 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಚಾಜಿರ್ಂಗ್ ಕೇಂದ್ರಗಳ ಸ್ಥಾಪನೆಗೆ ಬೆಂಗಳೂರಿನ ಮೆಡಿಕಲ್ ಸಿಸ್ಟಮ್‌ಗೆ ಎಲ್‌ಓಐ ನೀಡಲಾಗಿದೆ. ಇದಕ್ಕೆ ಟೆಂಡರ್ ಕರೆಯಲಾಗಿದ್ದು ಉಡುಪಿಯ 20 ಕೇಂದ್ರಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ತಿಳಿಸಿದ್ದಾರೆ.

ಹೆದ್ದಾರಿಗಳಲ್ಲಿ ಪಾಯಿಂಟ್ ಹೆಚ್ಚಳ
ಇವಿ ವಾಹನಗಳ ಬಳಕೆದಾರರ ದೂರ ಪ್ರಯಾಣವನ್ನು ಸುಗಮವಾಗಿಸುವ ಜತೆಗೆ ತಡೆರಹಿತ ಪ್ರಯಾಣ ಕಲ್ಪಿಸಲು ಇಂಧನ ಇಲಾಖೆ ಕಾರ್ಯೋನ್ಮುಖವಾಗಿದೆ. ರಾಜ್ಯದ ರಾ.ಹೆ. ಮತ್ತು ರಾಜ್ಯ ಹೆದ್ದಾರಿಗಳಲ್ಲಿರುವ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳಲ್ಲಿ 80 ಚಾಜಿರ್ಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ 32 ಮೆಸ್ಕಾಂ ವ್ಯಾಪ್ತಿಯ ಸ್ಥಳದಲ್ಲಿ, 48 ಸರ್ಕಾರಿ ಸ್ವಾಮ್ಯದ ಅವರಣಗಳಲ್ಲಿ ಸ್ಥಾಪನೆಯಾಗುತ್ತಿದೆ.

ಇವಿ ಮಿತ್ರ ಆ್ಯಪ್ ಬಳಕೆ ಹೇಗೆ?
ಇವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್ ಸೌಲಭ್ಯ ನೀಡುವಲ್ಲಿ ಬೆಸ್ಕಾಂನಲ್ಲಿ ಇವಿ ಮಿತ್ರ ಆ್ಯಪ್ ವ್ಯವಸ್ಥೆ ರೂಪಿಸಲಾಗಿದೆ. ಆ್ಯಪ್ ಒಪನ್ ಮಾಡಿದ ಕೂಡಲೇ ಸಮೀಪದ ಇವಿ ಚಾಜಿರ್ಂಗ್ ಸ್ಟೇಷನ್ ಜಿಪಿಎಸ್ ಮಾಹಿತಿ ನೀಡುತ್ತದೆ. ಐಕಾನ್ ಮೇಲೆ ಕ್ಲಿಕ್ ಮಾಡಿದಾಗ, ಆ ಸ್ಟೇಷನ್‌ನಲ್ಲಿ ಲಭ್ಯ ಚಾಜಿರ್ಂಗ್ ಪಾಯಿಂಟ್ ವಿವರ ತೋರಿಸುತ್ತದೆ. ಆ್ಯಪ್‌ನಲ್ಲಿರುವ ವ್ಯಾಲೆಟ್‌ಗೆ ಹಣ ಭರ್ತಿ ಮಾಡಿದ ನಂತರ ಚಾಜಿರ್ಂಗ್ ಪಾಯಿಂಟ್ ಬಳಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಹಣ ಪಾವತಿಸಬೇಕು. ಅಲ್ಲಿರುವ ಸಿಬ್ಬಂದಿ ಇವಿ ವಾಹನವನ್ನು ಚಾರ್ಜ್ ಮಾಡಲು ಸಹಕರಿಸುತ್ತಾರೆ. ವ್ಯವಸ್ಥೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವಲ್ಲಿ ಒಂದು ರಾಜ್ಯ- ಒಂದು ಆ್ಯಪ್ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ.

ಇಲೆಕ್ಟ್ರಿಕ್ ವಾಹನಗಳಿಗೆ ಅತ್ಯಂತ ಹೆಚ್ಚು ಸಾರ್ವಜನಿಕ ಚಾಜಿರ್ಂಗ್ ಕೇಂದ್ರಗಳನ್ನು ಕಲ್ಪಿಸಿದ ರಾಜ್ಯಗಳಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.
ಕೆ.ಜೆ ಜಾರ್ಜ್
ಇಂಧನ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net