

ಕುಶಾಲನಗರ: ಕನ್ನಡ ಜ್ಯೋತಿ ರಥವು ಕೊಡಗು ಜಿಲ್ಲೆಯಲ್ಲಿ 5 ದಿನಗಳ ಕಾಲ ಸಂಚರಿಸಿ ಗುರುವಾರ ಕುಶಾಲನಗರ ತಾಲೂಕಿನಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ತೆರಳಿತು.
ಕನ್ನಡ ಜ್ಯೋತಿ ರಥಕ್ಕೆ ಕೊಡಗಿನ ಗಡಿ ಶಿರಂಗಾಲ ಗೇಟ್ ಬಳಿ ಹಾಸನ ಜಿಲ್ಲೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರವಾಗಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮತ್ತು ಶಿರಂಗಾಲ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು.
ಕೂಡಿಗೆ ವೃತ್ತದ ಬಳಿ ಸ್ವಾಗತ: ಕೂಡಿಗೆ ವೃತ್ತದ ಹಾಲಿನ ಡೇರಿ ಬಳಿ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ ಮುಂದಿನ ಗ್ರಾಮಗಳಿಗೆ ಬೀಳ್ಕೊಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ತಾಲೂಕು ಸ್ಥಳೀಯ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕಸಾಪ ಘಟಕ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಹಾಗೂ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ, ಕನ್ನಡ ಭಾಷಾ ಸಂಘ, ಎಸ್‌ಡಿಎಂಸಿ ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಕೂಡಿಗೆ ವೃತ್ತದ ಹಾಲಿನ ಡೇರಿ ಬಳಿ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಎಲ್ಲರೂ ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಪ್ರೋತ್ಸಾಹ ನೀಡಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಕರೆ ನೀಡಿದರು.
ಕರ್ನಾಟಕ ಸುವರ್ಣ ಸಂಭ್ರಮ 50ರ ಉದ್ದೇಶ ಹಾಗೂ ಕನ್ನಡ ನಾಡಿನ ನಾಡು-ನುಡಿ, ಸಂಸ್ಕೃತಿ, ಪರಂಪರೆಯ ಮಹತ್ವ ಕುರಿತು ಮಾತನಾಡಿದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್, ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ವಿ.ಎಸ್.ಸುಮನ್ ಬಾಲಚಂದ್ರ, ಸಂಸ್ಥೆಯ ಮಾಜಿ ಅಧ್ಯಕ್ಷ ಹರ್ಷ, ಟಿ.ಕೆ.ರಾಜಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ವಿಠಲ, ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ, ಶಾಲಾ ವಿದ್ಯಾರ್ಥಿ ನಾಯಕ ಗೌತಮ್ ಇತರರು ಇದ್ದರು.
ಕೂಡಿಗೆ, ಹೆಬ್ಬಾಲೆ , ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿಗಳ ವತಿಯಿಂದ ಶಾಲಾ ಕಾಲೇಜು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ನಾಗರಿಕರು ಜತೆಗೂಡಿ ಕನ್ನಡ ಜ್ಯೋತಿ ರಥವನ್ನು ಹಾಸನ ಜಿಲ್ಲೆಗೆ ಬೀಳ್ಕೊಟ್ಟರು.