ಸರ್ಕಾರದ ಬೊಕ್ಕಸಕ್ಕೆ ಗ್ಯಾರಂಟಿ ಯೋಜನೆಯ ಹಣ ಉಳಿಸಿದ "ಕುಟುಂಬ ತಂತ್ರಾಂಶ'

bpl card
Published on

ಹರೀಶ್​ ಬೇಲೂರು ಬೆಂಗಳೂರು

ಕುಟುಂಬ ತಂತ್ರಾಂಶವು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ.ಮೊತ್ತದ ಗ್ಯಾರಂಟಿ ಯೋಜನೆಯ ಹಣ ಉಳಿಸಿದೆ. ಅನರ್ಹ ಕಾರ್ಡ್​ಗಳ ರದ್ದತಿಯಿಂದ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರಿಗೆ ಪಾವತಿ ಮಾಡಬೇಕಿದ್ದ ಅಂದಾಜು 110-120 ಕೋಟಿ ರೂ. ಸರ್ಕಾರಕ್ಕೆ ಉಳಿಕೆಯಾಗಿದೆ. ಪಡಿತರ ಚೀಟಿಗಳ ರದ್ದತಿಗೆ ವೇಗ ನೀಡಿದ್ದ ಇಲಾಖೆ, ಕುಟುಂಬ ತಂತ್ರಾಂಶದಿಂದ ಒಟ್ಟು 22,62,413 ಅನರ್ಹ ಬಿಪಿಎಲ್​, ಅಂತ್ಯೋದಯ ಕಾರ್ಡ್​ಗಳನ್ನು ಪತ್ತೆ ಮಾಡಿದೆ.

ಬಿಪಿಎಲ್​, ಅಂತ್ಯೋದಯ ಕಾರ್ಡ್​ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು 2023ರ ಜು.10ರಿಂದ ಜಾರಿಗೆ ತರಲಾಯಿತು. ಪ್ರತಿ ತಿಂಗಳು ಡಿಬಿಟಿ ಪೋರ್ಟಲ್​ ಮೂಲಕ ಆಹಾರ ಇಲಾಖೆಯು ಬಿಪಿಎಲ್​ ಕಾರ್ಡ್​ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ. ನಂತೆ 5 ಕೆಜಿ ಅಕ್ಕಿಗೆ 170 ರೂ., ಅಂತ್ಯೋದಯ ಕಾರ್ಡ್​ನಲ್ಲಿರುವ ನಾಲ್ವರು ಸದಸ್ಯರಿದ್ದರೆ ಕುಟುಂಬವೊಂದಕ್ಕೆ 170 ರೂ., 5 ಸದಸ್ಯರಿದ್ದರೆ 510 ರೂ. ಮತ್ತು ಆರು ಸದಸ್ಯರಿದ್ದರೆ 850 ರೂ. ನೀಡಲಾಗುತ್ತಿದೆ. ಆದರೆ, 22 ಲಕ್ಷ ಕಾರ್ಡ್​ಗಳ ರದ್ದತಿಯಿಂದಾಗಿ ಈ ತಿಂಗಳಿಂದ ಹಣ ಹಾಕುವುದನ್ನು ಇಲಾಖೆ ನಿಲ್ಲಿಸಿದೆ. ಆದರೆ, ಇದೇ ವೇಳೆ ಪಡಿತರ ಪಡೆಯದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಪಿಂಚಣಿ, ಆರ್​ಟಿಇ ಅಡಿ ಅರ್ಜಿ ಸಲ್ಲಿಸಲು ಕೆಲ ಕುಟುಂಬಗಳು ಮಾಡಿಸಿಕೊಂಡಿದ್ದ ಕಾರ್ಡ್​ಗಳು ರದ್ದಾಗಲಿದ್ದು, ಸೌಲಭ್ಯ ಪಡೆಯಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರಕ್ಕೂ ಅಕ್ಕಿ ಉಳಿಕೆ: ಆಹಾರ ಭದ್ರತೆ ಕಾಯ್ದೆಯಡಿ (ಎನ್​ಎಫ್​​​​​​ಎಸ್​ಎ) ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯಡಿ ರಾಜ್ಯದ ಬಿಪಿಎಲ್​ ಲಾನುಭವಿಗಳಿಗೆ, ಅಂತ್ಯೋದಯ ಕಾರ್ಡ್​ದಾರರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಬಿಪಿಎಲ್​ ಹೊಂದಿರುವ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಸೇರಿ ಒಟ್ಟು 5 ಕೆಜಿ ಆಹಾರ ಪದಾರ್ಥ ಹಾಗೂ ಪ್ರತಿ ಅಂತ್ಯೋದಯ ಕಾರ್ಡ್​ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ಆಹಾರ ಪದಾರ್ಥವನ್ನು ಉಚಿತವಾಗಿ ನೀಡುತ್ತಿದೆ. ಅನರ್ಹ ಕಾರ್ಡ್​ಗಳ ರದ್ದತಿಯಿಂದಾಗಿ ಕೇಂದ್ರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಹಣ ಉಳಿತಾಯವಾಗಲಿದೆ.

14 ಮಾನದಂಡ ಆಧಾರದಲ್ಲಿ ರದ್ದು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್​ಎಫ್​​​​​ಎಸ್​ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್​ ಕಾರ್ಡ್​ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಲಾನುಭವಿಗಳಿಗೆ 1,16,51,209 ಬಿಪಿಎಲ್​ ಕಾರ್ಡ್​ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್​ ಕಾರ್ಡ್​ಗಳಿವೆ. ಹಾಗಾಗಿ, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, 7.5 ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಎಂಎನ್​ಸಿ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋರಿಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನಚಾಲಿತ ದ್ವಿಚಕ್ರ, ತ್ರಿಚಕ್ರ ಕಾರು ಹೊಂದಿರುವ ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್​ ಕಾರ್ಡ್​ ರದ್ದುಪಡಿಸಿದೆ.

ಬಿಪಿಎಲ್​ ಮಾನದಂಡ ಪರಿಷ್ಕರಿಸಿ: ಕಾಲಬದಲಾದಂತೆ ಸಹಜವಾಗಿಯೇ ಕುಟುಂಬಗಳ ಆರ್ಥಿಕ ಸ್ಥಿತಿ ಬೆಳೆವಣಿಗೆಯಾಗುತ್ತಿದೆ. ರಾಜ್ಯದಲ್ಲಿ ಶೇ.80 ಮಂದಿ 100 ಸಿಸಿ ಮೇಲ್ಪಟ್ಟ ಇಂಧನಚಾಲಿತ ದ್ವಿಚಕ್ರ, ತ್ರಿಚಕ್ತ, ಕಾರು ಸೇರಿ ಇತರ ವಾಹನ ಹೊಂದಿರುವ ಕುಟುಂಬಗಳಿವೆ. ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರು, ಕಂಪನಿ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ 18&20 ಸಾವಿರ ರೂ. ವೇತನ ಸಿಗುತ್ತಿದೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಗಿನವರು. 15 ವರ್ಷದ ಹಿಂದಿನ ಜೀವನಕ್ಕೂ ಈಗಿನ ಜೀವನಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈ ಮಧ್ಯೆಯೂ ವರ್ಷದಿಂದ ವರ್ಷಕ್ಕೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ, ಬಡ ಕುಟುಂಬಗಳು, ಆರ್ಥಿಕ ನಿರ್ವಹಣೆಗೆ ಕಷ್ಟಪಡುತ್ತಿವೆ. ಪ್ರತಿ ಮನೆ ಮನೆಯಲ್ಲೂ ದ್ವಿಚಕ್ರ ವಾಹನ, ಕಾರುಗಳವೆ. ವರ್ಷದಿಂದ ವರ್ಷಕ್ಕೆ ಆದಾಯವೂ ವೃದ್ಧಿಯಾಗುತ್ತದೆ. ಹಾಗಾಗಿ, ಅವೈಜ್ಞಾನಿಕ ಬಿಪಿಎಲ್​ ಮಾನದಂಡ ಪರಷ್ಕರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅನರ್ಹ ಕಾರ್ಡ್​ಗಳ ವಿವರ:

* ಬಿಪಿಎಲ್​, ಅಂತ್ಯೋದಯ - 10,97,621

* ಆದಾಯ ತೆರಿಗೆ ಪಾವತಿದಾರರು - 1,06,152

* ವಾರ್ಷಿಕ 1.20 ಲಕ್ಷ ರೂ. ವರಮಾನ - 10,54,368

* ಕೆಜಿಐಡಿ, ಎಚ್​ಆರ್​ಎಂಎಸ್​ ಕುಟುಂಬಗಳು -4,272

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net