

ದಾವಣಗೆರೆ: ದಾವಣೆಗೆರೆ ಮೂಲದ ಒಂದೇ ಕುಟುಂಬದ ಮೂವರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಎಂಬ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ್(37), ಅವರ ಪತ್ನಿ ಪ್ರತಿಭಾ ಹೊನ್ನಾಳ್(35), ಅವರ ಪುತ್ರ ಯಶ್ ಹೊನ್ನಾಳ್(06) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಯೋಗೇಶ್-ಪ್ರತಿಭಾ ದಂಪತಿಗೆ 9 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ದಂಪತಿಗೆ ಆರು ವರ್ಷದ ಪುತ್ರನಿದ್ದಾನೆ. ಮದುವೆಯ ನಂತರ ದಂಪತಿಗಳು ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿರುವ ಬಾಲ್ಟಿಮೋರ್ ಎಂಬ ಪ್ರದೇಶದಲ್ಲಿ ನೆಲೆಸಿದ್ದರು. ಎರಡು ದಿನಗಳಿಂದ ಮನೆಯಿಂದ ಯಾರು ಹೊರಬಾರದೆ ಇದ್ದುದ್ದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವೈದ್ಯನ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಗಳ ಯೋಗಕ್ಷೇಮ ವಿಚಾರಿಸಲೆಂದು ಅವರ ಮನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದು, ಯಾರು ಕರೆಯನ್ನು ಸ್ವೀಕರಿಸದೆ ಇದ್ದಾಗ ಅನುಮಾನಗೊಂಡು ಮನೆಯ ಬಳಿ ಬಂದು ಪರಿಶೀಲನೆ ನಡೆಸಿದಾಗ ಮೂವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಬೆಂಗಳೂರಿನಲ್ಲಿ ವಾಸವಿರುವ ಯೋಗೇಶ್ ಅವರ ಸಹೋದರನಿಗೆ ವಿಷಯವನ್ನು ತಿಳಿಸಿದ್ದಾರೆ.
ಯೋಗೇಶ್ ತಾಯಿ ಶೋಭ ಮಾತನಾಡಿ, ಅಲ್ಲಿ ಏನಾಯಿತು ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಮೂವರ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಆದಷ್ಟು ಬೇಗ ಭಾರತಕ್ಕೆ ತರಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಗ ಯೋಗೇಶ್ ಒಂದು ವಾರದ ಹಿಂದೆ ಕರೆ ಮಾಡಿ ಮಾತನಾಡಿದ್ದ. ಕ್ಷೇಮವಾಗಿದ್ದೇವೆ ಎಂದು ತಿಳಿಸಿದ್ದ. ಸಾಧ್ಯವಾದರೆ ಡಿಸೆಂಬರ್‌ನಲ್ಲಿ ಬರುವುದಾಗಿಯೂ ಹೇಳಿದ್ದ. ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದ. ಏಕೆ ಹೀಗಾಯಿತೋ ತಿಳಿಯುತ್ತಿಲ್ಲ ಎಂದು ಯೋಗೇಶ್ ತಾಯಿ ಶೋಭ ಮಗನನ್ನು ನೆನೆದು ಭಾವುಕರಾಗಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಪ್ರತಿಕ್ರಿಯಿಸಿ ಜಿಲ್ಲಾಡಳಿತದಿಂದ ಅಮೆರಿಕದ ರಾಯಭಾರ ಕಚೇರಿಗೆ ಇ-ಮೇಲ್ ಸಂದೇಶ ಕಳಿಸಿದ್ದೇವೆ. ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ನೀಡಿದ್ದೇವೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.