

ಕಾರ್ಕಳ: ಸಾಣೂರು ಗ್ರಾಮದ ಹೊಳೆಯ ಬಳಿ ಆಟವಾಡುತಿದ್ದ ಸಂದರ್ಭ ಶಾಲಾ ಬಾಲಕ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾನೆ.
ಇರ್ವತ್ತೂರಿನ ಪುಷ್ಪ ದೇವಾಡಿಗ ಎಂಬುವರ ಪುತ್ರ ಚರಣ್ ರಾಜ್ (13) ಮೃತ ಬಾಲಕ. ಬಾಲಕ ಸಾಣೂರು ಹೈಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಬಿಡುವಿನ ಅವಧಿಯಲ್ಲಿ ಬೇರೆ ಮೂರು ಮಕ್ಕಳ ಜತೆಗೂಡಿ ಇಲ್ಲಿನ ಶಾಂಭವಿ ನದಿ ಕಡೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಬಾಲಕ ಹೊಳೆಗೆ ಬಿದ್ದಿದ್ದಾನೆ. ಸ್ಥಳಿಯರು ನೀರಿನಿಂದ ಮೇಲೆತ್ತಿ ರಕ್ಷಿಸಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಬಾಲಕ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ಮಂದಿ ಮಕ್ಕಳು ಜತೆಗಿದ್ದು, ಚರಣ್ ರಾಜ್ ಹೊಳೆಗೆ ಬಿದ್ದ ವೇಳೆ ಜತೆಗಿದ್ದವರ ಪೈಕಿ ಇನ್ನಿಬ್ಬರು ನೀರಿನ ಸೆಳೆತದ ಅಪಾಯಕ್ಕೆ ಸಿಲುಕಿದ್ದರು. ಇದೇ ವೇಳೆ ಅಲ್ಲೇ ಇದ್ದ ಅರ್ಚಕರೊಬ್ಬರು ಇಬ್ಬರನ್ನೂ ನೀರಿನಿಂದ ಮೇಲಕೆತ್ತಿ ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.