

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ದಾರಿದೀಪ ವ್ಯವಸ್ಥೆಗಳ ಆರು ತಿಂಗಳ 17.59ಲಕ್ಷ ರೂ. ಮೊತ್ತ ಪಾವತಿಸದ ಕಾರಣಕ್ಕಾಗಿ ಮೆಸ್ಕಾಂನಿಂದ ಪಡುಬಿದ್ರಿ ಗ್ರಾಪಂ ಕಚೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಗುರುವಾರ ನಡೆಯಿತು.
ಇದು ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲೆ ಇಂಧನ ಇಲಾಖೆ ಸವಾರಿಗೆ ಪ್ರತ್ಯಕ್ಷ ಸಾಕ್ಷಿಯಾಯಿತು. ಮೆಸ್ಕಾಂ ಕಚೇರಿ ಎದುರು ಗ್ರಾಮಾಡಳಿತದ ನಿರಂತರ 7 ಗಂಟೆ ಧರಣಿ ಬಳಿಕ ಮೆಸ್ಕಾಂನಿಂದ ವಿದ್ಯುತ್ ಮರು ಸಂಪರ್ಕ ಕಲ್ಪಿಸಿದ ಪ್ರಸಂಗವೂ ನಡೆಯಿತು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ ಪ್ರತಿಕ್ರಿಯಿಸಿ, ತಾವಾಗಲೀ, ಪಿಡಿಒ ಅವರಾಗಲೀ ಕಚೇರಿಯಲ್ಲಿ ಇಲ್ಲದ ವೇಳೆ ಗ್ರಾಪಂ ವಿದ್ಯುತ್ ಬಿಲ್ ಪಾವತಿಯಾಗಿದ್ದರೂ ಗ್ರಾಪಂಗೆ ಮೆಸ್ಕಾಂ ಪ್ರತಿನಿಧಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಬೆಳಗ್ಗೆ 11 ಗಂಟೆಯಿಂದಲೇ ಮೆಸ್ಕಾಂ ಶಾಖಾಧಿಕಾರಿಗೆ ಘೆರಾವ್ ಹಾಕಿದ್ದ ಗ್ರಾಪಂ ಸದಸ್ಯರು ಅವರ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಕಾಪು ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಬಳಿ ಗ್ರಾಪಂ ಮಾಜಿ ಅಧ್ಯಕ್ಷ ರವಿ ಶೆಟ್ಟಿ, ತಮಗೆ ಜನತೆಯ ಕರ ವಸೂಲಿಗೆ ಆಗಿರುವ ತೊಂದರೆ ಹಾಗೂ 15ನೇ ಹಣಕಾಸಿನ ಮೂರನೇ ಕಂತಾಗಿ ಬರಬೇಕಾಗಿರುವ ಬಾಕಿ 33ಲಕ್ಷ ರೂ. ಗಳನ್ನು ಈಗಲೂ ಎದುರು ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ಬಾಕಿ ಕಂತಿನ ಪಾವತಿ ಪಂಚಾಯಿತಿ ಮಾಡಲಿರುವುದಾಗಿ ತಿಳಿಸಿದರು. ಆದರೆ ಮೇಲಧಿಕಾರಿಗಳ ಆದೇಶವಿರುವಾಗ ಈ ಕ್ರಮ ಕೈಗೊಳ್ಳಲಾಗಿದೆ. ಅವರ ಸೂಕ್ತ ನಿರ್ದೇಶನ ಬಂದರಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಇಇ ಉತ್ತರಿಸಿದರು.
ಸಂಜೆವರೆಗೂ ಈ ಗೊಂದಲ ಮುಂದುವರಿದಿದ್ದು ಗ್ರಾಪಂ ಸದಸ್ಯರು ಸ್ಥಳದಲ್ಲೇ ಊಟ, ಉಪಹಾರ ಸ್ವೀಕರಿಸಿ ಮೆಸ್ಕಾಂ ಸಿಬ್ಬಂದಿಗೂ ದಿಗ್ಬಂಧನ ವಿಧಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಸಿಇಒ ಪ್ರತೀಕ್ ಬಾಯಲ್ ಅವರ ಮಟ್ಟದ ಸಭೆ ನಡೆದು ಸಂಜೆ 5 ಗಂಟೆ ವೇಳೆಗೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಮರು ಸಂಪರ್ಕ ಕಲ್ಪಿಸುವ ಭರವಸೆ ಬಳಿಕ ಧರಣಿ ವಾಪಸ್ ಪಡೆದರು.
ಮುಂದಿನ ದಿನಗಳಲ್ಲಿ ಪಂಚಾಯಿತಿ ನಿರ್ಣಯದ ಮೂಲಕ ಗ್ರಾಪಂ ರಸ್ತೆಗಳಲ್ಲಿ ಹಾಕಲಾಗಿರುವ ಮೆಸ್ಕಾಂ ಕಂಬಗಳು ಹಾಗೂ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಮೇಲೂ ಶೇಕಡಾವಾರು ಕರ ವಿಧಿಸುವ ನಿಯಮ ಜಾರಿಗೆಗೊಳಿಸಿ ಅನುಷ್ಠಾನಿಸಲು ಪಡುಬಿದ್ರಿ ಗ್ರಾಪಂ ಹಿಂದುಮುಂದು ನೋಡದು ಎಂದು ಗ್ರಾಪಂ ಸದಸ್ಯರು ಎಚ್ಚರಿಸಿದರು.