

ಕಡಬ: ಕಳೆದೆರಡು ದಿನಗಳಿಂದ ಕಡಬ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಸುರಿದ ಮಳೆ ಗಾಳಿಗೆ ಕಡಬ ತಾಲೂಕು ಬಲ್ಯ ಗ್ರಾಪಂ ವ್ಯಾಪ್ತಿಯ ಕಡಬ- ನೆಲ್ಯಾಡಿ ಮುಖ್ಯರಸ್ತೆಯ ಬಲ್ಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬೆಳಗ್ಗೆ ಕಾರ್ಮಿಕರು, ವಿದ್ಯಾರ್ಥಿಗಳು ವಾಹನವಿಲ್ಲದೆ ಪರದಾಡಿದ ಪ್ರಸಂಗ ಎದುರಾಯಿತು. ಈ ಮಾರ್ಗದಲ್ಲಿ ಸಂಚರಿಸುವ ಬೀದಿಗುಡ್ಡೆ ನೆಲ್ಯಾಡಿ- ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಸಂಚರಿಸಿದೆ. ರಸ್ತೆಗೆ ಮರ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ವಿದ್ಯುತ್ ತಂತಿಗಳಿಗೆ ಮರದ ಕೊಂಬೆ ಬಿದ್ದಿರುವುದರಿಂದ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.