ನಕಲಿ ವೈದ್ಯನ ಬಂಧನ

Published on

ಹಲಗೂರು: ರೋಗಿಯೊಬ್ಬರ ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ನಕಲಿ ವೈದ್ಯನೊಬ್ಬನನ್ನು ಹಲಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.


ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕೃಷ್ಣಮೂರ್ತಿ ಹೆಗ್ಗಡೆ ಬಂಧಿತ ಆರೋಪಿ. ಯಾವುದೇ ಪರವಾನಗಿ ಇಲ್ಲದೆ ಹಲವು ವರ್ಷಗಳಿಂದ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಎನ್ನಲಾಗಿದೆ.


2019ರಲ್ಲಿ ದಡಮಹಳ್ಳಿ ಗ್ರಾಮದ ಶಿವಲಿಂಗೇಗೌಡ ಅವರಿಗೆ ಈತ ನೀಡಿದ ಚುಚ್ಚುಮದ್ದಿನಿಂದ ಕೀವು ಪೂರಿತ ಗಾಯವಾಗಿ ಮೃತಪಟ್ಟಿದ್ದರು. ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೃಷ್ಣಮೂರ್ತಿ ಹೆಗ್ಗಡೆ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಆಗ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿ ದಾಳಿ ಮಾಡಿ ಬೀಗ ಹಾಕಿದ್ದರೂ ಹಿಂಬಾಗಿಲನ್ನು ತೆರೆದು ಕ್ಲಿನಿಕ್ ನಡೆಸುತ್ತಿದ್ದ.


ವೈದ್ಯನ ಪ್ರಮಾಣ ಪತ್ರಗಳ ಕುರಿತು ತನಿಖೆ ನಡೆಸಿದಾಗ ಬೇರೆಯವರ ಹೆಸರಿನಲ್ಲಿ ದಾಖಲೆ ಪಡೆದು ಕ್ಲಿನಿಕ್ ನಡೆಸುತ್ತಿರುವುದು ಇದೀಗ ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಕ್ಲಿನಿಕ್ ಮೇಲೆ ಬುಧವಾರ ತಡರಾತ್ರಿ ಆರೋಗ್ಯಾಧಿಕಾರಿ ಹಾಗೂ ಪೊಲೀಸರು ದಾಳಿ ನಡೆಸಿ ಕೃಷ್ಣಮೂರ್ತಿ ಹೆಗ್ಗಡೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.


ಸಿಪಿಐ ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಪಿಎಸ್‌ಐ ಬಿ.ಮಹೇಂದ್ರ, ಗ್ರಾಮ ಲೆಕ್ಕಿಗರಾದ ಲತಾ, ಸೋಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net