

ಕಾಸರಗೋಡು: ಹೊಸದುರ್ಗದಲ್ಲಿ ಪ್ರಮಾಣಪತ್ರ ಹಾಗೂ ಇತರ ಸರ್ಟಿಫಿಕೆಟ್ ನಕಲಿಯಾಗಿ ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಮೂವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಕಾಸರಗೋಡು, ಕಣ್ಣೂರು, ಚೆನ್ನೈ, ಮುಂಬೈ ಹಾಗೂ ದುಬೈಯಲ್ಲೂ ಏಜೆಂಟ್‌ಗಳನ್ನು ಹೊಂದಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.
ವಿವಿಧ ವಿಶ್ವವಿದ್ಯಾಲಯಗಳ ನಕಲಿ ಸರ್ಟಿಫಿಕೆಟ್, ವಾಹನ ಚಾಲನಾ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿ ನಾನಾ ದಾಖಲೆಗಳನ್ನು ನಕಲಿಯಾಗಿ ಪೂರೈಸಿರುವುದು ಬೆಳಕಿಗೆ ಬಂದಿದೆ. ನಕಲಿ ಎಂಬಿಬಿಎಸ್ ಸರ್ಟಿಫಿಕೆಟ್‌ಗಳನ್ನೂ ಪೂರೈಸಲಾಗಿದ್ದು, ಇದಕ್ಕಾಗಿ 60 ಸಾವಿರ ರೂ. ವಸೂಲಿ ಮಾಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಕೇಂದ್ರ ಕಾರ್ಯಾಚರಿಸುತ್ತಾ ಬಂದಿದ್ದು, ಹಲವಾರು ಮಂದಿ ಸರ್ಟಿಫಿಕೆಟ್ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೇರಳ- ಕರ್ನಾಟಕದ ಕೆಲವೊಂದು ಆರ್‌ಟಿಒ ಕಚೇರಿಗಳ ಹೆಸರಲ್ಲೂ ಇಲ್ಲಿಂದ ನಕಲಿ ಡ್ರೈವಿಂಗ್ ಸರ್ಟಿಫಿಕೆಟ್ ಪೂರೈಸಲಾಗಿದೆ. ನಕಲಿ ಇಂಜಿನಿಯರಿಂಗ್ ಸರ್ಟಿಫಿಕೆಟ್‌ಗಳಿಗಾಗಿ ಕೆಲವರು ಕೇಂದ್ರವನ್ನು ಸಂಪರ್ಕಿಸಿರುವುದಾಗಿ ಮಾಹಿತಿಯಿದೆ. ಹಣ ನೀಡಿದಲ್ಲಿ ಒಂದು ವಾರದೊಳಗೆ ಸರ್ಟಿಫಿಕೆಟ್ ತಯಾರಿಸಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರಕ್ಕೆ ದಾಳಿ ನಡೆಸಿರುವ ಪೊಲೀಸರು ಕೇಂದ್ರದಿಂದ ಪ್ರಿಂಟರ್, ನಕಲಿ ಮೊಹರುಗಳು, ಸರ್ಟಿಫಿಕೆಟ್ ತಯಾರಿಗಿರುವ ವಿಶೇಷ ಪೇಪರ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೊಸದುಗ್ ಕಡಪ್ಪುರ ನಿವಾಸಿ ಶಿಹಾಬ್(38), ಹೊಸದುರ್ಗ ಕ್ಲಾಯಿಕ್ಕೋಡ್ ನಿವಾಸಿ ಪಿ.ರವೀಂದ್ರನ್(51) ಹಾಗೂ ಹೊಸದುರ್ಗ ಕೊವ್ವಲ್‌ಪಳ್ಳಿ ನಿವಾಸಿ ಸಂತೋಷ್ ಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರಲ್ಲಿ ಕಡಪ್ಪುರ ನಿವಾಸಿ ಶಿಹಾಬ್‌ನನ್ನು 2014ರಲ್ಲಿ ಕೋಯಿಕ್ಕೋಡಿನ ಕರಿಪ್ಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಕಲಿ ಪಾಸ್‌ಪೋರ್ಟ್ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಕೇಸು ಜಾರಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.