ಅನ್ಸಾರ್ ಇನೋಳಿ ಉಳ್ಳಾಲ

ಶಾಶ್ವತ ಬೀಗ ಹಾಕಲು ಸಿದ್ಧವಾಗಿದ್ದ ಶಾಲೆ, ಶಿಕ್ಷಣಪ್ರೇಮಿಗಳ ನೆರವಿನಿಂದ ಮತ್ತೆ ತಲೆ ಎತ್ತಿ ನಿಂತಿದೆ. ಮಾಡೂರು ಸರ್ಕಾರಿ ಶಾಲೆಯ ಯಶೋಗಾಥೆಯಿದು. ಶಾಲೆಗೆ ಆಂಗ್ಲಸ್ಪರ್ಶ ನೀಡಿದ ಫಲವಾಗಿ ಶಾಲಾರಂಭಕ್ಕೆ ಮುನ್ನವೇ ತರಗತಿಗಳು ಫುಲ್ ಆಗಿಬಿಟ್ಟಿವೆ. ಸರ್ಕಾರದ ನೆರವು ಮಾತ್ರ ಅಗತ್ಯವಿದೆ.
1979ರಲ್ಲಿ 1ರಿಂದ 4ನೇ ತರಗತಿವರೆಗೆ ಸುಮಾರು 100 ಮಂದಿಯಷ್ಟು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಶಾಲೆ ಕ್ರಮೇಣ ಎಂಟನೇ ತರಗತಿವರೆಗೆ ತಲುಪಿತ್ತು. ಆದರೆ ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತು. ಜತೆಗೆ ಶಿಕ್ಷಕರ ಸಂಖ್ಯೆಯೂ ಇಳಿಯಿತು. ಕಳೆದ ವರ್ಷ 1ರಿಂದ 8ನೇ ತರಗತಿವರೆಗೆ 69 ಮಕ್ಕಳು ಮಾತ್ರ ಇದ್ದರು. ಒಂದನೇ ತರಗತಿಯಲ್ಲಿ ಹತ್ತು ಮಕ್ಕಳು ಮಾತ್ರ ಇದ್ದರು. ಶಾಲೆಯಲ್ಲಿ ಮುಖ್ಯ ಶಿಕ್ಷಕಿ, ಮೂವರು ಶಾಶ್ವತ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕಿ ಇದ್ದರು.
ಪುನಶ್ಚೇತನಕ್ಕೆ ನೆರವಾಯ್ತು ಆಟಿ ಕಾರ್ಯಕ್ರಮ
ಶಾಲೆಯ ಸುತ್ತಲೂ ಗಿಡ, ಬಳ್ಳಿ, ಪೊದೆಗಳು ಬೆಳೆಯಲಾರಂಭಿಸಿತ್ತು. ಕೋಟೆಕಾರ್ ಪಟ್ಟಣ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾದ ಸುಜಿತ್ ಮಾಡೂರು ಆಸಕ್ತಿ ವಹಿಸಿ, ಶಾಲೆಯತ್ತ ಸ್ಥಳೀಯರನ್ನು ಸೆಳೆಯುವ ನಿಟ್ಟಿನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಆಯೋಜಿಸಿದ್ದರು. ಸ್ಥಳೀಯರು ಶಾಲೆಗೆ ಮರುಜೀವ ನೀಡಲು ಆಸಕ್ತಿ ತೋರಿಸಿದರು. ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ಕಟ್ಟಡ ನವೀಕರಣ ಪ್ರಾರಂಭವಾಯಿತು. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಂಪ್ಯೂಟರ್ ಆಧರಿತ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್ ತರಗತಿ, ವೈಫೈ, ಸಿಸಿ ಕ್ಯಾಮರಾ, ಪ್ರತಿ ಕೋಣೆಗೂ ಟಿವಿ ವ್ಯವಸ್ಥೆ ಮಾಡುವ ಕೆಲಸ ಪ್ರಗತಿಯಲ್ಲಿದೆ.

ಶಾಲಾರಂಭಕ್ಕೆ ಮುನ್ನವೇ ತರಗತಿಗಳು ಭರ್ತಿ
ಸ್ಥಳೀಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಸಭೆ ಕರೆದು ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಯನ್ನೂ ಆಂಗ್ಲ ಮಾಧ್ಯಮದಲ್ಲಿ ಆರಂಭಿಸಲು ನಿರ್ಧರಿಸಲಾಯಿತು. ಕಟ್ಟಡ ಅಭಿವೃದ್ಧಿ ಕೆಲಸ ಆರಂಭಿಸಲಾಯಿತು. ಆಂಗ್ಲಮಾಧ್ಯಮ ಆರಂಭದ ಬಗ್ಗೆ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಲಾಯಿತು. ಶಾಲಾರಂಭಕ್ಕೆ ತಿಂಗಳಿರುವಾಗಲೇ 30 ಮಕ್ಕಳ ಸಾಮರ್ಥ್ಯವಿದ್ದರೂ 33 ಮಕ್ಕಳು ಎಲ್‌ಕೆಜಿಗೆ, 20 ಮಂದಿ ಯುಕೆಜಿಗೆ ಹಾಗೂ ಒಂದನೇ ತರಗತಿಗೆ 15 ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಮೊರೆ
ಶಾಲೆಗೆ ಎರಡು ಕಟ್ಟಡಗಳಿದ್ದು ಹೆಂಚಿನ ಕಟ್ಟಡ ಶಿಥಿಲವಾಗಿದೆ. ಇನ್ನೊಂದು ಕಟ್ಟಡ ನವೀಕರಿಸಲಾಗಿದೆ. ಒಂದೇ ಸಭಾಂಗಣದಲ್ಲಿ 1ರಿಂದ 3, 4ರಿಂದ 5ರವರೆಗೆ ಮತ್ತು ಶಿಕ್ಷಕರ ಕಚೇರಿಯಲ್ಲಿ 6ರಿಂದ 7 ಹಾಗೂ 8ನೇ ತರಗತಿ ನಡೆಸಲಾಗುತ್ತಿದ್ದು, ನಾಲ್ಕು ಕೊಠಡಿಗಳ ಅವಶ್ಯಕತೆಯಿದೆ. ಈ ವರ್ಷದಿಂದ ಮೂವರು ಅತಿಥಿ ಶಿಕ್ಷಕರು ಮತ್ತು ಇಬ್ಬರು ಆಯಾಗಳನ್ನು ನೇಮಿಸಲಾಗಿದೆ. ವೇತನ ಮತ್ತು ನಿರ್ವಹಣೆಯ 70 ಸಾವಿರ ರೂ. ವೆಚ್ಚವನ್ನು ಸ್ಥಳೀಯರ ನೆರವಿನಿಂದ ಶಾಲಾಭಿವೃದ್ಧಿ ಸಮಿತಿ ಭರಿಸಲಿದೆ. ಗಂಡು ಮಕ್ಕಳ ಶೌಚಗೃಹ ಅಗತ್ಯವಿದೆ.
ಹೊಸದಾಗಿ ಆರಂಭಗೊಳ್ಳುವ ಆಂಗ್ಲಮಾಧ್ಯಮ ಶಾಲೆ ಶಾಲಾಭಿವೃದ್ಧಿ ಸಮಿತಿ ಸಹಕಾರದಲ್ಲಿ ನಡೆಯುತ್ತದೆ. ಮಾಡೂರು ಶಾಲೆ ವಿಶೇಷ ಅನುಮತಿ ಮೇರೆಗೆ ನಡೆಯಲಿದ್ದು, ಸರ್ಕಾರದಿಂದ ಅನುಮತಿ ದೊರಕಿದ ಬಳಿಕ ಮೂಲ ಸೌಕರ್ಯ ನೀಡಲಾಗುತ್ತದೆ.
ಎಚ್.ಆರ್.ಈಶ್ವರ್
ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ
ದಾನಿಗಳ ನೆರವಿನಿಂದ ಶಾಲಾ ಕೊಠಡಿಗಳನ್ನು ನವೀಕರಿಸಲಾಗುತ್ತಿದೆ, ಮಕ್ಕಳಿಗೆ ಆಟದ ವ್ಯವಸ್ಥೆ, ಗಾರ್ಡನ್ ಮಾಡಲಾಗುತ್ತಿದೆ. ಸ್ಪೀಕರ್ ಖಾದರ್ ಒಂದು ಲಕ್ಷ ರೂ. ದೇಣಿಗೆ ವೈಯಕ್ತಿಕ ನೆಲೆಯಲ್ಲಿ ನೀಡಿದ್ದಾರೆ. ಗುಣಮಟ್ಟದ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸ್ಮಾರ್ಟ್ ತರಗತಿ ಪ್ರಾರಂಭವಾಗಿದೆ. ವೈಫೈ ವ್ಯವಸ್ಥೆ, ಸಿಸಿ ಕ್ಯಾಮರಾ, ಎಲ್ಲ ತರಗತಿ ಕೊಠಡಿಗೂ ಟಿವಿ ವ್ಯವಸ್ಥೆ ಮಾಡಲಾಗುವುದು.
ಸುಜಿತ್ ಮಾಡೂರು
ಕೋಟೆಕಾರ್ ಪ.ಪಂ. ಸದಸ್ಯ
ಒಂದು ವರ್ಷದಿಂದ ಮುಖ್ಯಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದೇನೆ. ಬರುವಾಗ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ಈ ವರ್ಷದಿಂದ ಎಲ್ ಕೆಜಿಯಿಂದ ಒಂದನೇ ತರಗತಿವರೆಗೆ ಆಂಗ್ಲಮಾಧ್ಯಮ ಮಾಡಲಾಗಿದೆ. ದಾನಿಗಳು ಸಹಕಾರ ನೀಡುತ್ತಿದ್ದಾರೆ. ಜಿಪಿಟಿ ಶಿಕ್ಷಕರ ಅವಶ್ಯಕತೆಯಿದೆ.
ಪುಷ್ಪ ಯು.
ಮಾಡೂರು ಶಾಲೆ ಮುಖ್ಯಶಿಕ್ಷಕಿ