ಬಿಡದಿ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ

FotoJet (1)
Published on

 ರಾಮನಗರ ಡಿವೈಎಸ್ಪಿ ಶ್ರೀಧರ್ ನೇತೃತ್ವದಲ್ಲಿ ತಪಾಸಣೆ

ಬಿಡದಿ : ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ನಿಲ್ದಾಣದಲ್ಲಿ ಶೋಧ ಕಾರ್ಯ ನಡೆಸಿದರು.

ಬೆಂಗಳೂರಿನ ರೈಲ್ವೆ ನಿಲ್ದಾಣದ ಕಂಟ್ರೋಲ್ ರೂಂಗೆ ಸೋಮವಾರ ರಾತ್ರಿ ಕರೆಮಾಡಿ ಬಿಡದಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ತಿಳಿಸಿದ್ದಾರೆ. ತಕ್ಷಣ ರೈಲ್ವೆ ಪೊಲೀಸರು ಸ್ಥಳೀಯ ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿಯೆ ಒಂದು ಸುತ್ತಿನ ತಪಾಸಣೆ ಮಾಡಲಾಯಿತು.

ಮಂಗಳವಾರ ಬೆಳಗ್ಗೆ ಸಹ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್‌ನಿಂದ ಪರಿಶೀಲನೆ ಕಾರ್ಯ ನಡೆಯಿತು.

ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ರಾಮನಗರ ಡಿವೈಎಸ್ಪಿ ಶ್ರೀಧರ್ ಅವರ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.

ಆರೋಪಿಗಳ ಪರವಾಗಿ ಕರೆ : ಇಲ್ಲಿನ ಪ್ರತಿಷ್ಠಿತ ಕಂಪನಿಯ ಶೌಚಗೃಹದಲ್ಲಿ ಪಾಕಿಸ್ತಾನ ಪರ ಗೋಡೆಬರಹ ಬರೆದಿದ್ದ ಆರೋಪಿಗಳ ಪರವಾಗಿ ಈ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಪರ ಬರಹ ಆರೋಪದಲ್ಲಿ ಉತ್ತರ ಕರ್ನಾಟಕ ಮೂಲದ ಹೈಮದ್ ಹುಸೇನ್, ಸಾಧಿಕ್ ಎಂಬುವರನ್ನು ಬಂಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ರೈಲ್ವೆ ಸ್ಟೇಷನ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net