

ನಾಗಮಂಗಲ: ಜಲಜೀವನ ಮಿಷನ್ ಯೋಜನೆ ಕಾಮಗಾರಿ ಕಳಪೆ, ಕೆಲಗೆರೆ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳು ಜನಸ್ಪಂದನಾ ಸಭೆಯಲ್ಲಿ ಕೇಳಿ ಬಂದವು.
ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ತನ್ವೀರ್ ಆಸಿಫ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಒಟ್ಟು 18 ಅರ್ಜಿಗಳು ಸ್ವೀಕೃತಗೊಂಡಿದ್ದು, ಎಲ್ಲವನ್ನೂ ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು. ಕೆಲ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಸಭೆಯ ನಂತರ ಕೆಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ವೈದ್ಯರು ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ಶೀಘ್ರ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಜೆಜೆಎಂ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಹಾಗೂ ಕಾಮಗಾರಿಗೆ ಅಳವಡಿಸಿರುವ ಪೈಪ್ ಕಡಿಮೆ ಗುಣಮಟ್ಟದಿಂದ ಕೂಡಿದ್ದು ಅದನ್ನು ಸರಿಪಡಿಸಿಕೊಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಇಒ ಹಾಗೂ ನಾಗಮಂಗಲ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಿದರು. ಹುಲಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಲ್ಯಾಣಿ ಕಾಮಗಾರಿ ಪರಿಶೀಲಿಸಿದರು. ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ಶಾಲೆಗಳಿಗೆ ಭೇಟಿ : ಕೆಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಮತ್ತು ಬೋಧನೆ, ಸ್ವಚ್ಛತೆ, ಬಿಸಿಯೂಟ ಪರಿಶೀಲಿಸಿದರು. ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು. ಶಾಲಾ ಆವರಣದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಕಾಂಪೌಂಡ್ ಕಾಮಗಾರಿ ಪರಿಶೀಲಿಸಿದರು. ಹುಲಿಕೆರೆ ಗ್ರಾಮದ ಅನುದಾನಿತ ಆದಿಶಕ್ತಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಮಕ್ಕಳ ಜತೆ ಸಂವಾದ ನಡೆಸಿದರು.
ಹಕ್ಕುಪತ್ರ ವಿತರಣೆಗೆ ಕ್ರಮ: ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಡು ಬುಡುಕೆ ಕಾಲನಿ ನಿವಾಸಿಗಳು ಹಕ್ಕುಪತ್ರ ವಿತರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಂಬಂಧ ತುರ್ತು ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ತಾಪಂ ಇಒ ಸತೀಶ್‌ಕುಮಾರ್, ನರೇಗಾ ಸಹಾಯಕ ನಿರ್ದೇಶಕಿ ಮೇನಕಾದೇವಿ, ಬಿಇಒ ಯೋಗೇಶ್ ಮತ್ತಿತರಿದ್ದರು.