

ಗೌರಿಬಿದನೂರು: ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಎ1 ಸ್ಟೀಲ್ ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದ ತ್ಯಾಜ್ಯಕ್ಕೆ ಬೆಂಕಿ ತಗುಲಿ ಆತಂಕ ಸೃಷ್ಟಿಯಾಗಿತ್ತು. ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಾಚಿ ದಟ್ಟ ಹೊಗೆ ಆವರಿಸಿತ್ತು.
ಗೌರಿಬಿದನೂರಿನಿಂದ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಆದರೆ ಇಂಧನಗಳನ್ನು ಬಳಸಿದ ಕಬ್ಬಿಣದ ಸಕ್ಯೆಾಪ್ ಆಗಿರುವ ಕಾರಣ ಎಷ್ಟೇ ಪ್ರಯತ್ನಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಅಗ್ನಿಶಾಮಕ ದಳದ ನೀರು ಖಾಲಿಯಾಗುತ್ತಿದ್ದಂತೆ ಕಾರ್ಖಾನೆಯಲ್ಲಿದ್ದ ನೀರು ಹಾಗೂ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತಂದು ಬೆಂಕಿ ನಂದಿಸುವ ಪ್ರಯತ್ನ ನಡೆಸಲಾಯಿತು. ಸದ್ಯಕ್ಕೆ ಸಂಪೂರ್ಣ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಾರ್ಖಾನೆಯವರ ನಿರ್ಲಕ್ಷ್ಯ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು.
ಕಾರ್ಮಿಕರು ಕಂಗಾಲು
ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೆಂಕಿ ಬಿದ್ದ ಕಸದ ರಾಶಿಯ ಸಮೀಪದಲ್ಲೇ 8 ಕಾರ್ಮಿಕರ ವಸತಿ ಗೃಹಗಳಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರ ಕುಟುಂಬಗಳು ಕಂಗಾಲಾಗಿ, ಕೈಗೆ ಸಿಕ್ಕ ಸಾಮಗ್ರಿಗಳೊಂದಿಗೆ ಮನೆಯಿಂದ ಹೊರಬಂದಿವೆ.
ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾರ್ಖಾನೆ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಿಸುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚಿಸಿದ್ದಾರೆ.
ಸ್ಥಳೀಯರ ಪ್ರತಿಭಟನೆ
ಕುಡುಮಲಕುಂಟೆ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ನಿಯಮ ಉಲ್ಲಂಘಿಸುತ್ತಿವೆ. ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸುರಕ್ಷತೆಯ ಯಾವುದೇ ನಿಯಮ ಪಾಲಿಸುತ್ತಿಲ್ಲ. ರಾಸಾಯನಿಕ ಕಾರ್ಖಾನೆಗಳು ಬೇಕಾಬಿಟ್ಟಿಯಾಗಿ ತ್ಯಾಜ್ಯ ಹೊರಬಿಡುತ್ತಿದ್ದು, ಇದರಿಂದ ಸುತ್ತಲ ಪ್ರದೇಶದಲ್ಲಿ ಜಲ, ನೆಲ ಹಾಗೂ ವಾಯು ಮಾಲಿನ್ಯವಾಗುತ್ತಿದೆ. ಬಾಯ್ಲರ್ ಬ್ಲಾಸ್ಟ್ ಆಗಿ ಕಾರ್ಮಿಕರು ಮೃತಪಟ್ಟ ಘಟನೆಗಳು ನಡೆದಿವೆ ಎಂದು ಸ್ಥಳೀಯ ಗ್ರಾಮಸ್ಥರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೂ ಉಂಟು.
ಅಧಿಕಾರಿಗಳ ಶಾಮೀಲು
ತಪ್ಪಿತಸ್ಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ, ಪರಿಸರ ಮಾಲಿನ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ, ಎಚ್ಚರಿಕೆ ನೀಡುವುದು, ತಿಪ್ಪೆ ಸಾರಿಸಿ ಹೋಗುವುದು ಸಾಮಾನ್ಯವಾಗಿದೆ. ಯಾವುದೇ ಕಠಿಣ ಕ್ರಮ ಜರುಗಿಸುತ್ತಿಲ್ಲ. ಆದ್ದರಿಂದ ಪದೇಪದೆ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಅಧಿಕಾರಿಗಳು ಕಾರ್ಖಾನೆಯವರೊಂದಿಗೆ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.