ಒಮ್ಮತ ಮೂಡದೆ ಕಾರ್ಖಾನೆ-ರೈತರ ಸಭೆ ವಿಫಲ

ಒಮ್ಮತ ಮೂಡದೆ ಕಾರ್ಖಾನೆ-ರೈತರ ಸಭೆ ವಿಫಲ
Published on

ತಿ.ನರಸೀಪುರ: ತಾಲೂಕಿನ ಸುಗಂಧರಾಜ ಬೆಳೆಯುವ ರೈತರು ಹಾಗೂ ನ್ಯಾಚುರಲ್ ಅಂಡ್ ಎಸೆಂಸ್ ಅಯಿಲ್ ಪ್ರೈಲಿ. ಕಾರ್ಖಾನೆ ವ್ಯವಸ್ಥಾಪಕರ ನಡುವೆ ನಡೆದ ಹೂ ಖರೀದಿ ವಿಚಾರ ಸಭೆ ವಿಫಲವಾಯಿತು.

ಪಟ್ಟಣದ ಗುರುಭವನದಲ್ಲಿ ಶನಿವಾರ ತಹಸೀಲ್ದಾರ್ ಸುರೇಶಾಚಾರ್ ಅಧ್ಯಕ್ಷತೆಯಲ್ಲಿ ಕಾರ್ಖಾನೆ ಹಾಗೂ ರೈತರ ಸಭೆ ನಡೆಯಿತು.

ರೈತ ಕೆಬ್ಬೇಹುಂಡಿ ಶಿವಕುಮಾರ್ ಮಾತನಾಡಿ, ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದಲ್ಲಿ ಖಾಸಗಿ ಸುಗಂಧರಾಜ ಕಾರ್ಖಾನೆ ಅವರು ಸ್ಥಳೀಯ ರೈತರು ಬೆಳೆದ ಸುಗಂಧರಾಜ ಹೂ ಖರೀದಿ ಮಾಡದೆ ತಮಿಳುನಾಡಿನಿಂದ ಹೂ ವ್ಯಾಪಾರ ಮಾಡುತ್ತಿದ್ದಾರೆ ಇದರಿಂದ ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತದೆ, ಮಧ್ಯವರ್ತಿಗಳು ರೈತರಿಂದ ಕೇವಲ 22 ರೂ.ಗೆ ಹೂವು ಖರೀದಿಸುತ್ತಿದ್ದಾರೆ, ಒಂದು ಕೆ.ಜಿಗೆ 70 ರೂ ನೀಡಬೇಕೆಂದು ಒತ್ತಾಯಿಸಿದರು.

ಕಾರ್ಖಾನೆಯ ನಿರ್ದೇಶಕ ಕೆ.ಎನ್ ಫಣೀಶ್ ಮಾತನಾಡಿ, ತಾಲೂಕಿನ ಸುಗಂಧರಾಜ ಹೂ ಬೆಳೆಯುವ ರೈತರ ಬಳಿ ಒಪ್ಪಂದ ಮಾಡಿಕೊಳ್ಳಲಾಗುವುದು, ಅದರಂತೆ ಹೂ ಬೆಳೆಯಲು ರಾಸಾಯನಿಕ, ಗೊಬ್ಬರ ಹಾಗೂ ಕಂಪನಿ ಮಾರ್ಗದರ್ಶನದಲ್ಲಿ ಹೂ ಬೆಳೆದರೆ 43 ರೂ.ಗೆ ಪ್ರತಿನಿತ್ಯ 3 ಸಾವಿರ ಕೆ.ಜಿ ಹೂ ಖರೀದಿಸಲಾಗುವುದು, ಸ್ಥಳೀಯರು ಬೆಳೆಯವ ಹೂವಿನ ಗುಣಮಟ್ಟ ಕಡಿಮೆ ಇದೆ ಎಂದರು.

ಕಡಿಮೆ ಬೆಲೆಗೆ ನೀಡಿದರೆ ಹೂ ಗುಣಮಟ್ಟವಾಗಿದೆ. ಹೆಚ್ಚಿನ ಬೆಲೆ ನೀಡುವಂತೆ ಕೇಳಿದರೆ ಗುಣಮಟ್ಟವಿಲ್ಲ ಎಂದು ಉತ್ತರ ನೀಡುತ್ತಿರಿ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಒಪ್ಪಂದ ಮಾಡಿಕೊಂಡು ಕೆ.ಜಿಗೆ 70 ರೂ. ನೀಡಬೇಕು, ಒಪ್ಪಂದ ಮಾಡಿಕೊಳ್ಳದೆ ಇರುವ ರೈತರಿಗೆ 43 ರೂ. ಗೆ ಖರೀದಿಸಬೇಕೆಂದು ಒತ್ತಾಯಿಸಿದರು.

ಇದರಿಂದ ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರ ನಡುವೆ ಒಮ್ಮತ ಬಾರದೆ ರೈತರು ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು.

ರೈತ ಕೆಬ್ಬೇಹುಂಡಿ ಶಿವಕುಮಾರ್ ಮಾತನಾಡಿ, ಕಂಪನಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಕಾರ್ಖಾನೆಯವರು ತಮಿಳುನಾಡಿನಿಂದ ಹೂ ಖರೀದಿಸುತ್ತಿದ್ದಾರೆ, ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿಗಳು ಸಭೆ ಕರೆದು ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸಬೇಕೆಂದರು.

ಮುಂದಿನ ದಿನಗಳಲ್ಲಿ ರೈತರು ಕಾರ್ಖಾನೆಯ ಬಳಿ ಹೋರಾಟ ಕೈಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಾ, ಕಾರ್ಖಾನೆಯ ಮ್ಯಾನೇಜರ್ ಹರಿಪ್ರಸಾದ್, ಜರ್ನಾಧನ್, ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಸಂಚಾಲಕ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಗೌರಿಶಂಕರ್, ಪ್ರದೀಪ್, ಪರಶಿವಮೂರ್ತಿ, ತಾಲೂಕು ರೈತ ಸಂಘ ಅಧ್ಯಕ್ಷ ಕರೋವಟ್ಟಿ ಕುಮಾರಸ್ವಾಮಿ, ಇ.ರಾಜು, ಚಂದ್ರಶೇಖರ್, ಶಾಂತರಾಜು, ನಂಜುಡಸ್ವಾಮಿ, ಮಹದೇವಸ್ವಾಮಿ, ಶಿವಣ್ಣ, ಕೆಂಚಪ್ಪ ಶಿವಕುಮಾರ್ ಹಾಗೂ ನಂಜನಗೂಡು, ಮಳವಳ್ಳಿ ಸೇರಿದಂತೆ ವಿವಿಧ ಭಾಗದ ನೂರಾರು ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net