

ಸಿ.ಎ.ಮುರಳೀಧರ, ಗೌರಿಬಿದನೂರು
ಯಾರೇ ಆದರೂ ಅನಾರೋಗ್ಯ ಎಂದಾಕ್ಷಣ ಆಸ್ಪತ್ರೆಗೆ ಓಡೋಡಿ ಬರುತ್ತಾರೆ. ಆರ್ಥಿಕವಾಗಿ ಹಿಂದುಳಿದ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಬೇಕಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೇವೆ ಸಿಗದೆ ಪರದಾಡುವಂತಾಗಿದೆ.
ಹೌದು. ಇದಕ್ಕೆ ನಿದರ್ಶನ ಗೌರಿಬಿದನೂರಿನ ಸಾರ್ವಜನಿಕ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ.
ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ರೋಗಿಗಳು ಮೂಲ ಸೌಕರ್ಯಗಳು ವಂಚಿತರಾಗಿದ್ದಾರೆ.
ವೀಲ್‌ಚೇರ್‌ಗಿಲ್ಲ ಗಾಲಿ!: ಆಸ್ಪತ್ರೆಯಲ್ಲಿ ಅಸಹಾಯಕ ರೋಗಿಗಳಿಗಾಗಿ ಇರುವ ವೀಲ್‌ಚೇರ್‌ಗಳಿಗೆ ಗಾಲಿಗಳಿಲ್ಲ. ರೋಗಿಗಳ ಸಹಾಯಕ್ಕೆಂದು ಬಂದ ಸಂಬಂಧಿಕರೇ ಮುರಿದ ಕುರ್ಚಿಗಳಲ್ಲಿ ರೋಗಿಗಳನ್ನು ವಾರ್ಡ್ ಹಾಗೂ ಒಪಿಡಿ ಬಳಿಗೆ ಸಾಗಿಸಿಕೊಂಡು ಹೋಗಬೇಕು. ನಿಯಮಾನುಸಾರ ರೋಗಿಗಳನ್ನು ಆಸ್ಪತ್ರೆಯ ಡಿ ಗ್ರೂಪ್ ನೌಕರರೇ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಬೇಕು. ಆದರೆ ಇದು ಇಲ್ಲಿ ಉಲ್ಟಾ ಇದೆ. 23 ಮಂದಿ ಹೊರಗುತ್ತಿಗೆ ಸಿಬ್ಬಂದಿ ರಾತ್ರಿ ಮತ್ತು ಹಗಲಿನ ಪಾಳಿಯಲ್ಲಿ ಆಸ್ಪತ್ರೆ ಆವರಣದಲ್ಲೇ ರೋಗಿಗಳ ಸೇವೆಗೆ ಇರಬೇಕು. ಆದರೆ ಇಲ್ಲಿ ಇಲಾಖೆ ಕಾಯಂ ನೌಕರರಿರಲಿ ಹೊರಗುತ್ತಿಗೆ ನೌಕರರ ದರ್ಶನ ಸಿಗುವುದು ಕಷ್ಟ.
ರೋಗಿಗಳು ಹೈರಾಣ
ಇಡೀ ಆಸ್ಪತ್ರೆಗೆ ಪ್ರವೇಶ ದ್ವಾರದಲ್ಲಿ ಮೇಲ್ಛಾವಣೆಗೆ ಎರಡು ಕಡೆ ಪಾತ್ರ ಫ್ಯಾನ್ ಅಳಡಿಸಲಾಗಿದೆ. ರೋಗಿಗಳು ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕೂರುವ ಒಳಾಂಗಣದಲ್ಲೂ ಒಂದೇ ಒಂದು ಫ್ಯಾನ್ ಇಲ್ಲದೆ ಬಿಸಿಲಿನ ಬೇಗೆಯ ಜತೆಗೆ ನೂರಾರು ಮಂದಿಯ ಬೆವರಿನ ವಾಸನೆಯ ನಡುವೆ ಹೊರ ರೋಗಿಗಳು ವೈದ್ಯರ ಚಿಕಿತ್ಸೆಗಾಗಿ ಕಾಯಬೇಕಾದ ದುಸ್ಥಿತಿಯಿದೆ.
ಶೌಚಗೃಹಕ್ಕಿಲ್ಲ ನೀರಿನ ಸಂಪರ್ಕ
ಇನ್ನು ಆಸ್ಪತ್ರೆಯಲ್ಲಿರುವ ಶೌಚಗೃಹಗಳಿಗೆ ಸೂಕ್ತ ನೀರಿನ ಸೌಲಭ್ಯವಿಲ್ಲ. ಆಸ್ಪತ್ರೆ ಆವರಣದ ಒಳಗಿನ ಗಿಡಗಳಿಗೆ ನೀರು ಹಾಕಿ ತಿಂಗಳು ಕಳೆದಿವೆ. ಆಂಬುಲೆನ್ಸ್ ದುರುಪಯೋಗದ ಬಗ್ಗೆ ನಾಗರಿಕರಿಂದ ಗಂಭೀರ ದೂರುಗಳು ಕೇಳಿಬರುತ್ತಿವೆಯಾದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ.
ನಿಧಿ ಬಳಸದೆ ನಿರ್ಲಕ್ಷ್ಯ
ಆಸ್ಪತ್ರೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ವೈದ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಆಸ್ಪತ್ರೆಯ ರೋಗಿಗಳ ಬಳಕೆದಾರರ ನಿಧಿಯಲ್ಲಿ ಹಾಗೂ ಸಾರ್ವಜನಿಕ ಸೌಲಭ್ಯಕ್ಕಾಗಿ ಲಕ್ಷಾಂತರ ರೂ. ಹಣವಿದ್ದರೂ ಅದನ್ನು ಸೌಲಭ್ಯಗಳಿಗಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಆಡಳಿತ ವೈದ್ಯಾಧಿಕಾರಿಗಳ ವಿಭಾಗ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.
ಗೌರಿಬಿದನೂರು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಹೆಚ್ಚಿನ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಮೂಲ ಸೌಲಭ್ಯಗಳ ಕೊರತೆಯಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ನೀರಿನ ಸೌಲಭ್ಯ ಕಲ್ಪಿಸುವ ಜತೆಗೆ, ಶೌಚಗೃಹದ ಸ್ವಚ್ಛತೆ ಕಾಪಾಡಬೇಕಿದೆ.
ಮಹೇಶ್, ಚೆನ್ನಬೈರೇನಹಳ್ಳಿ ಗೌರಿಬಿದನೂರು ತಾಲೂಕು
ಸಾರ್ವಜನಿಕ ಆಸ್ಪತ್ರೆ ನಿರ್ವಹಣೆಗೆ ಆರೋಗ್ಯ ಸಮಿತಿ ರಚನೆ ಮಾಡಬೇಕು. ಸೇವಾ ಮನೋಭಾವ ಇರುವವರನ್ನು ಸಮಿತಿಗೆ ನೇಮಕ ಮಾಡಬೇಕು. ಆಸ್ಪತ್ರೆಯ ಆಂಬುಲೆನ್ಸ್ ಮತ್ತು ಮೂಲ ಸೌಲಭ್ಯ ವ್ಯವಸ್ಥೆ ಸುಧಾರಿಸಿದರೆ ಜನತೆಗೆ ಅನುಕೂಲವಾಗಲಿದೆ.
ನವೀನ್, ಡಾ.ಎಚ್.ಎನ್.ಬಡಾವಣೆ