ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಸಲ್ಲ: ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ಎಚ್ಚರಿಕೆ

hnl lokayukta may 9
ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಗುರುವಾರ ಹೊನ್ನಾಳಿ, ನ್ಯಾಮತಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೊರೆ ಮಾತನಾಡಿದರು. ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ಎಸ್.ಕೆ., ಇನ್ಸ್‌ಪೆಕ್ಟರ್‌ಗಳಾದ ಮಧುಸೂಧನ್, ಪ್ರಭು ಬಿ. ಸುರೇನ, ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಇತರರಿದ್ದರು.
Published on

ಹೊನ್ನಾಳಿ: ಸರ್ಕಾರದ ಎಲ್ಲ ರೀತಿಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿಳಂಬವಿಲ್ಲದೇ ದೊರಕಿಸಿಕೊಡಲು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು. ಜನರಿಂದ ದೂರುಗಳು ಬಂದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದನ್ನು ಎಲ್ಲ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಜನ, ಜಾನುವಾರು ಆರೋಗ್ಯ ಸುರಕ್ಷತೆಗೆ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಹಾಗೂ ಪಶು ವೈದ್ಯ ಇಲಾಖೆ ಅಧಿಕಾರಿಗಳಿಗೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಿಡಿಪಿಒ ಜ್ಯೋತಿ ಅವರಿಗೆ ಸೂಚಿಸಿದರು.

ಹಿಂದಿನಿಂದಲೂ ಶಾಲೆಗಳಿಗೆ ದಾನಿಗಳು ಭೂದಾನ ಮಾಡಿದ್ದು, ಈ ಬಗ್ಗೆ ಬಿಇಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ಪಡೆದು ದಾಖಲೆ ಪತ್ರಗಳನ್ನು ಸರಿಪಡಿಸಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಭೀಕರ ಬರ, ಬಿಸಿಲು ಇರುವ ಕಾರಣ ಬಹಳಷ್ಟು ಪ್ರಾಣಿ, ಪಕ್ಷಿಗಳಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಈ ಕಾರಣಕ್ಕೆ ಕೆಲವೊಮ್ಮೆ ಅವು ಜನವಸತಿ ಪ್ರದೇಶಗಳ ಕಡೆ ನುಗ್ಗುವ ಸಂಭವವಿದೆ. ಅರಣ್ಯ ವ್ಯಾಪ್ತಿಯಲ್ಲಿ ಹೊಂಡಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣದಲ್ಲಿ ಸ್ವಚ್ಛತೆ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಅವರಿಂದ ಮಾಹಿತಿ ಪಡೆದ ಲೋಕಾಯುಕ್ತ ಎಸ್‌ಪಿ, ಯಾವುದಕ್ಕೂ ಕೊರತೆ ಬಾರದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಮನವಿ ಸಲ್ಲಿಕೆ: 2022-23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಮನೆ ಬಿದ್ದುಹೋಗಿದೆ. ತಮ್ಮ ಪತಿಯ ಜಮೀನಿನಲ್ಲಿ ಸರ್ಕಾರದ ಅನುದಾನದ ಮೊದಲ ಕಂತಿನಿಂದ ತಳಪಾಯ ಹಾಕಿದ್ದೇವೆ. ನಂತರದ ಕಂತುಗಳನ್ನು ಕಂದಾಯ ಇಲಾಖೆ ತಡೆಹಿಡಿದಿದ್ದು, ಬಿದ್ದ ಮನೆಯ ಜಾಗದಲ್ಲೇ ಕಟ್ಟಬೇಕಿತ್ತು ಎಂದು ತಕರಾರು ಮುಂದಿಟ್ಟಿದ್ದಾರೆ ಎಂದು ಬಸವನಹಳ್ಳಿಯ ಯಶೋದಮ ್ಮಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ಮನವಿ ಪರಿಶೀಲಿಸಿದ ಲೋಕಾಯುಕ್ತ ಎಸ್ಪಿ, ಬೇರೆ ಜಾಗದಲ್ಲಿ ಮನೆ ಕಟ್ಟಿದರೆ ಅನುದಾನ ಕೊಡಲು ಬರುವುದಿಲ್ಲ ಎಂದು ಮೊದಲೇ ಅಧಿಕಾರಿಗಳು ತಿಳಿಸಬೇಕಿತ್ತು. ಕೆಲ ಕಂತು ಬಿಡುಗಡೆ ಮಾಡಿ ಈಗ ತಡೆಹಿಡಿದರೆ ಹೇಗೆ? ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಕಂತುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನ ಮಾಡಬೇಕು ಎಂದು ಸೂಚಿಸಿ 15 ದಿನದ ಗಡುವು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net